ಕನ್ನಡಪ್ರಭ ವಾರ್ತೆ ಮೂಡುಬಿದಿರೆ ನಮ್ಮ ಬದುಕು ಸುಂದರವಾಗಿರಲು ನಮ್ಮ ಮನಸ್ಸು, ಮಾತು ಸ್ವಚ್ಛವಾಗಿರಬೇಕು. ಮಾತಿನಂತೆ ನಮ್ಮ ನಡೆಯೂ ಪರಿಶುದ್ದವಾಗಿರಬೇಕು ಎಂದು ಉಡುಪಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಸಾವಿರ ಕಂಬದ ಬಸದಿ ಆವರಣದಲ್ಲಿ ಸೋಮವಾರ ರಾತ್ರಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾರ್ಚಾವರ್ಯ ಸ್ವಾಮೀಜಿಯವರ ಹಿರಿತನದಲ್ಲಿ ನಡೆದ ಮಹಾವೀರ ಸ್ವಾಮಿಯ ೨೬೨೩ನೇ ಜನ್ಮಕಲ್ಯಾಣ ಮಹೋತ್ಸವ, ಬಸದಿಯ ಕಿರಿಯ ರಥೋತ್ಸವ ಸಂದರ್ಭ ಅವರು ಮಹಾವೀರ ಜಯಂತಿ ಉದ್ಘಾಟಿಸಿ ಆಶೀರ್ವಚನ ನೀಡಿದರು
ಉದ್ಯಮಿ ರತ್ನಾಕರ ಜೈನ್ ಶ್ರೀ ಮಹಾವೀರ ಜ್ಯೋತಿ ಬೆಳಗಿಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಪ್ರಧಾನ ಉಪನ್ಯಾಸ ನೀಡಿದರು.
ಭಟ್ಟಾರಕ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಆದಿನಾಥ ತೀರ್ಥಂಕರರ ಜನ್ಮಭೂಮಿಯೂ ಹೌದು. ಶ್ರೀ ರಾಮನ ತತ್ವಾದರ್ಶಗಳ ಬಗ್ಗೆ ಜೈನರಿಗೂ ಅಪಾರ ಗೌರವವಿದೆ. ಸನಾತನ ಧರ್ಮ ಮತ್ತು ಜೈನ ಧರ್ಮ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಉಡುಪಿ ಜೈನ್‌ಮಿಲನ್‌ನ ಪ್ರಸನ್ನ ಕುಮಾರ್ ಪ್ರಧಾನ ಅತಿಥಿಗಳಾಗಿದ್ದರು. ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್ ಸ್ವಾಗತಿಸಿದರು. ಆನಡ್ಕ ದಿನೇಶ್ ಕುಮಾರ್ ವಂದಿಸಿದರು. ಮೊಕ್ತೇಸರ ಆದರ್ಶ ಅರಮನೆ ಉಪಸ್ಥಿತರಿದ್ದರು. ನೇಮಿರಾಜ ಜೈನ್ ನಿರೂಪಿಸಿದರು. ಶ್ರೀ ಜೈನಮಠ ಟ್ರಸ್ಟ್ ವತಿಯಿಂದ ತನ್ವಿ ರಾವ್ ಮಂಗಳೂರು, ಚಾರ್ವಿ ಜೈನ್ ಶಿರ್ತಾಡಿ ಇವರಿಂದ ನೃತ್ಯ, ಬಳಿಕ ರಥೋತ್ಸವ ಶ್ರೀವಿಹಾರ, ಚಂದ್ರಪ್ರಭ ಸ್ವಾಮಿಗೆ ೧೦೮ ಕಲಶಾಭಿಷೇಕ ಜರುಗಿತು.