ಹೊಸದುರ್ಗ: ವಚನ ಸಂಸ್ಕೃತಿಯ ಅರಿವು ಮಕ್ಕಳಲ್ಲಿ ಮೂಡಿದರೆ ಖಂಡಿತ ಅವರ ಬದುಕು ಸುಸಂಸ್ಕೃತವಾಗುವುದರಲ್ಲಿ ಅನುಮಾನವಿಲ್ಲ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ವರ್ಷದ ಹರ್ಷ ಹಾಗೂ ವಚನ ಬೆರಗು ಅರಿವಿನ ಮಾಲಿಕೆ ಕೃತಿ ಲೋಕಾರ್ಪಣಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಮಾತನಾಡಿದರು.ಇಂದಿನ ಯುವಜನತೆ ದಿಕ್ಕು ತಪ್ಪುತ್ತದೆ. ಇಂತಹ ಸಂದರ್ಭದಲ್ಲಿ ಬೆಳಕು ಪಡೆದುಕೊಳ್ಳಬೇಕೆ ಹೊರತು ಕಿಡಿಯನ್ನಲ್ಲ. ಬದುಕಿನಲ್ಲಿ ಬೆಳಕು ಪಡೆದುಕೊಳ್ಳಲು 12ನೆಯ ಶತಮಾನದ ಕಡೆ ನಾವೆಲ್ಲರೂ ಮುಖ ಮಾಡಬೇಕಿದೆ. ವಚನಕಾರರ ಕಾಲಕ್ಕೂ ಮುಂಚೆ ಧರ್ಮ, ದೇವರುಗಳ ಹೆಸರಿನಲ್ಲಿ ಸಮಾಜ ದಿಕ್ಕು ತಪ್ಪಿಸುವ ಸ್ಥಿತಿಯಲ್ಲಿತ್ತು. ಇಂಥ ಸ್ಥಿತಿಯಲ್ಲಿ ಸಮಾಜಕ್ಕೆ ಸರಿದಾರಿಯನ್ನು ತೋರಿಸಿದವರು ಬಸವಾದಿ ಶಿವಶರಣರು. ಅಂಥ ವಿಚಾರಗಳನ್ನು ಮಕ್ಕಳಿಗೆ ಮುಟ್ಟಿಸುವ ಅಗತ್ಯ ತುಂಬ ತುರ್ತಾಗಿ ಬೇಕಾಗಿದೆ ಎಂದರು.
ಮಕ್ಕಳು ಕೇವಲ ವಿದ್ಯಾವಂತರಾಗದೆ ಪ್ರಾಮಾಣಿಕರು, ನೀತಿವಂತರೂ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಇಂದಿನ ಆಧುನಿಕ ಯುಗದಲ್ಲಿ ತಾವು ಸಾಕಿದ ಪ್ರಾಣಿ ಪ್ರೀತಿಸುವಂತೆ ತಂದೆ-ತಾಯಿಗಳನ್ನು, ಬಂಧು-ಬಳಗವನ್ನು ಪ್ರೀತಿಸುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿ ಎಂದ ಶ್ರೀಗಳು ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿ ಮೊಬೈಲ್ ಸಂಸ್ಕೃತಿ ಹೆಚ್ಚಿದೆ. ಆದ್ದರಿಂದ ಪೋಷಕರು ಹಾಗೂ ಸಾರ್ವಜನಿಕರು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲಿಕ್ಕೆ ಸಾಧ್ಯ ಎಂದರು.ಸಾನ್ನಿಧ್ಯವಹಿಸಿದ್ದ ಬ್ರಹ್ಮವಿದ್ಯಾ ನಗರದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜ ಕೆಟ್ಟು ಹೋಗಿದೆ. ಸಂಸ್ಕೃತಿ ಹಾಳಾಗುತ್ತಿದೆ ಎಂದು ಹಳಹಳಿಸುತ್ತಿರುವವರ ಸಂಖ್ಯೆಯೇ ಹೆಚ್ಚು. ಅಂಥದ್ದರಲ್ಲಿ ಇದಕ್ಕೆ ಪರ್ಯಾಯವಾಗಿ ಏನು ಕೊಡಬೇಕು ಎಂದು ಯೋಚಿಸಿ ಅದಕ್ಕೆ ತಕ್ಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಂಸ್ಕೃತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಬಸವಣ್ಣನವರ ಸಪ್ತಶೀಲಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಭ್ರಷ್ಟಾಚಾರ, ಹಿಂಸೆ, ಮೌಢ್ಯಗಳನ್ನು ನಿರಾಕರಿಸುವಂಥ ಕಾರ್ಯಗಳು ತನ್ನಿಂದ ತಾನೆ ನಡೆಯುವವು. ಜಗತ್ತಿನಾದ್ಯಂತ ಪ್ರೀತಿ ತನ್ನಿಂದ ತಾನೆ ಮಡುಗಟ್ಟುವುದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೊದಲು ವಚನಕಾರರ ಬದುಕು-ಬರಹಗಳನ್ನು ತಲುಪಿಸಿದರೆ ಅವರ ಬದುಕು ಸುಸಂಸ್ಕೃತವಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಇಳಕಲ್‌ನ ಜಾನಪದ ವಿದ್ವಾಂಸರಾದ ಡಾ.ಶಂಭು ಬಳಿಗಾರ್ ಮಾತನಾಡಿ, ಮನುಷ್ಯನಿಗೆ ರೂಪ, ಅಧಿಕಾರ, ಯೌವನ ಮತ್ತು ಸಂಪತ್ತುಗಳಲ್ಲಿ ಯಾವುದಾದರು ಹೆಚ್ಚಾದರು ಮನುಷ್ಯ ಹಾಳಾಗುವುದು ನಿಶ್ಚಿತ. ಮಂಗನಿಗೆ ಹೆಂಡ ಕುಡಿಸಿ, ಚೇಳು ಕಡಿಸಿದಂತೆ ಇಂದಿನ ಯುವಕರು ಹೊಸ ವರ್ಷದ ಆರಂಭದಲ್ಲಿ ಕುಡಿದು, ಕುಣಿದು ಕುಪ್ಪಳಿಸುತ್ತಿದ್ದಾರೆ. ಯುವಕರು ಬೆಳೆದಂತೆ ಸುಸಂಸ್ಕೃತರಾಗಬೇಕೇ ಹೊರತು ವಿಕೃತಿ ಮೆರೆಯಬಾರದು. ಪ್ರಕೃತಿಯನ್ನು ವಿಕೃತಿಯನ್ನಾಗಿ ಮಾಡದೆ ಸಂಸ್ಕೃತಿಯನ್ನಾಗಿ ಮಾಡಿಕೊಳ್ಳಬೇಕು. ಜನ-ದನಗಳು ಒಟ್ಟೊಟ್ಟಿಗೆ ಬಾಳಿದಂಥ ಸಂಸ್ಕೃತಿ ನಮ್ಮದು. ಅಷ್ಟರ ಮಟ್ಟಿಗೆ ಪ್ರಕೃತಿ ಹಿರಿಯರು ತಮ್ಮೊಳಗೆ ಆವಾಹಿಸಿಕೊಂಡಿದ್ದರು. ಹೆಂಡತಿಗೆ ತಕ್ಕ ಗಂಡನಾಗಿ, ತಂದೆ-ತಾಯಿಗಳಿಗೆ ತಕ್ಕ ಮಕ್ಕಳಾಗಿ, ಸಮಾಜಕ್ಕೆ ಶಕ್ತಿಯಾಗಿ ಯುವ ಪೀಳಿಗೆ ಬಾಳಬೇಕು ಎಂದರು.ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯಕ, ಡಾ.ಮೋಹನ ಚಂದ್ರಗುತ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿದರು.
ಶಿವಕುಮಾರ ಕಲಾಸಂಘದ ವಚನ ಬೆರಗು ಅರಿವಿನ ಮಾಲಿಕೆಯಡಿ ಪ್ರಕಟಗೊಂಡ ಬಸವ ಪ್ರಜ್ಞೆ, ಲಿಂಗಾಯತರು ಮತ್ತು ಬಸವ ತತ್ವ, ಬಸವಣ್ಣ ಮತ್ತು ವಚನಗಳು, ಅಕ್ಕಮಹಾದೇವಿ ಮತ್ತು ವಚನಗಳು, ಮಾದಾರ ಚೆನ್ನಯ್ಯ, ಅಂಬಿರ ಚೌಡಯ್ಯ, ಸೊನ್ನಲಿಗೆ ಸಿದ್ಧರಾಮ, ಆಯ್ದಕ್ಕಿ ಲಕ್ಕಮ್ಮ, ಅಲ್ಲಮಪ್ರಭು ದೇವರು, ಮಡಿವಾಳ ಮಾಚಿದೇವ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಲೇಖಕರಾದ ಡಾ.ಜಿ.ಪ್ರಶಾಂತ ನಾಯಕ್, ಕುಮಾರ್.ಎನ್, ಉಮಾಶಂಕರ ಓ.ಎಂ, ಡಾ.ಮೋಹನ ಚಂದ್ರಗುತ್ತಿ, ಪ್ರತಿಮಾ, ಚರಣ ಜಂಬಾನಿ ಮತ್ತು ಅಣ್ಣಪ್ಪ ಎನ್.ಮಳೀಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುಸ್ತಕ ಮತ್ತು ಕಾರ್ಯಕ್ರಮದ ದಾಸೋಹಿಗಳನ್ನು ಗೌರವಿಸಲಾಯಿತು. ಬಂದ ಪ್ರೇಕ್ಷಕರಿಗೆಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಜಾಹ್ನವಿ ಎಸ್.ಗೌಡ ಮತ್ತು ಜಿ.ಎ.ತೋರಣ ಸ್ವಾಗತಿಸಿ, ವಂದಿಸುವುದರೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು.ಸಮಾರಂಭದ ನಂತರ ಶಿವಸಂಚಾರ-23 ತಂಡದವರು ಸಾಳಂಕಿಯವರ ರಚಿಸಿದ, ಮಾಲತೇಶ ಬಡಿಗೇರ ಅವರು ನಿರ್ದೇಶಿಸಿರುವ ತಾಳಿಯ ತಕರಾರು ನಾಟಕವನ್ನು ಪ್ರದರ್ಶಿಸಿದರು.