- ನವಜೀವನ ಜಾಥಾ, ಸಮಾವೇಶದಲ್ಲಿ ಶಾಸಕ ಟಿ.ಡಿ.ರಾಜೇಗೌಡ
- - -ಬಾಳೆಹೊನ್ನೂರು: ದುಶ್ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗಲಿದೆ. ದುಶ್ಚಟದಿಂದ ಹೊರಬರುವುದು ಅಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಇಲ್ಲಿಗೆ ಸಮೀಪದ ಸಂಗಮೇಶ್ವರ ಪೇಟೆ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ವಲಯದಿಂದ ಆಯೋಜಿಸಿದ್ದ ನವಜೀವನ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಮೇಲೆ ಆಗುವ ದುಷ್ಪರಿಣಾಮ ಹಲವಾರು ಇವೆ. ಕಾನೂನು ಎಷ್ಟೇ ಕಠಿಣವಾಗಿದ್ದರೂ ಕಣ್ಣು ತಪ್ಪಿಸಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ಬದುಕಿನಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಚಿಂತನೆ ಸಮಯೋಚಿತವಾಗಿದೆ ಎಂದರು.ಉಜ್ಜಿಯಿನಿ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ. ಗೋಪಾಲಗೌಡ ಮಾತನಾಡಿ, ನವಜೀವನ ಸಮಿತಿ ಸದಸ್ಯರ ಸೇವೆ ಶ್ಲಾಘನೀಯವಾಗಿದೆ. ಮಾದಕ ವಸ್ತು ಮುಕ್ತ ಕರ್ನಾಟಕ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಸದಸ್ಯರಿಗೆ ಅಭಿನಂದನೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಮೂಡಿಗೆರೆಯ ಯೋಜನಾಧಿಕಾರಿ ಸುಧೀರ್ ಜೈನ್ ಮಾತನಾಡಿ, ದುಶ್ಚಟದಿಂದ ಸಂಸಾರದಲ್ಲಿ ಕುಟುಂಬ ಕಲಹ, ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ. ಕಳ್ಳ ಸಾಗಾಣಿಕೆಯಂತಹ ದುಷ್ಕೃತ್ಯಗಳಲ್ಲಿ ಕೆಲವು ತೊಡಗಿಸಿಕೊಂಡು ಸಮಾಜಕ್ಕೆ ಕಂಟಕಪ್ರಾಯವಾಗುತ್ತಾರೆ. ಈ ಹಿನ್ನೆಲೆ ದುಶ್ಚಟದ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ ಎಂದರು.ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಚಿಪ್ರಗುತ್ತಿ, ಹುಯಿಗೆರೆ ಗಿರೀಶ್, ಪ್ರಮುಖರಾದ ಕೆ.ಎಸ್.ಗಣೇಶ್, ಕವಿತಾ ಲಿಂಗರಾಜ್, ಬಿಂದು, ಹೇಮಾವತಿ, ಪೂರ್ಣೇಶ್, ಆಲ್ಫೋನ್ಸ್, ವೀಣಾ, ಬಿ.ಸಿ.ರತ್ನಾಕರ ಮತ್ತಿತರರು ಹಾಜರಿದ್ದರು.
- - --೧೯ಬಿಹೆಚ್‌ಆರ್೧:
ಬಾಳೆಹೊನ್ನೂರು ಸಮೀಪದ ಸಂಗಮೇಶ್ವರ ಪೇಟೆಯಲ್ಲಿ ಆಯೋಜಿಸಿದ್ದ ನವಜೀವನ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.