ಕಾಲನ ಭಾಷೆ, ಪರಿಪಾಷೆ ಅರಿತರೆ ಬದುಕು ಸುಲಲಿತ: ರಾಘವೇಶ್ವರ ಶ್ರೀಗಳು

KannadaprabhaNewsNetwork |  
Published : Jul 29, 2024, 12:48 AM IST
ಶ್ರೀಗಳು ಅನಾವರಣ ಮಾಡುತ್ತಿರುವುದು | Kannada Prabha

ಸಾರಾಂಶ

ಕಾಲದ ಮುಖ್ಯ ಲಕ್ಷಣ ಪರಿವರ್ತನೆ. ಯೋಗಿಗಳು ಕಾಲವನ್ನು ಮೀರಲು ಪ್ರಯತ್ನ ಮಾಡುತ್ತಾರೆ. ಶಾಶ್ವತವಾಗಿ ಉಳಿಯುವಂಥ, ಅವಿಕಾರವಾದ್ದನ್ನು ಬಯಸುತ್ತಾರೆ.

ಗೋಕರ್ಣ: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡರೆ ಬದುಕು ಸುಲಲಿತ. ಕಾಲವನ್ನು ಮೀರಬೇಕಾದರೆ ಅದರ ಪರಿಭಾಷೆ ಅರ್ಥ ಮಾಡಿಕೊಳ್ಳಬೇಕು. ಗ್ರಹ, ರಾಶಿ, ನಕ್ಷತ್ರ, ವಾರ ಹೀಗೆ ವಿವಿಧ ಅಂಶಗಳ ಮೂಲಕ ಕಾಲನ ಭಾಷೆ ಅರ್ಥ ಮಾಡಿಕೊಳ್ಳಬಹುದು. ಗ್ರಹಚಕ್ರ ಎಂದರೆ ಪ್ರಕೃತಿ. ಇವುಗಳ ಚಲನೆಗೆ ಅನುಗುಣವಾಗಿ ಬದುಕು ಬದಲಾಗುತ್ತಾ ಹೋಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು, ಕಾಲದ ಭಾಷೆ ಅರ್ಥ ಮಾಡಿಕೊಂಡರೆ ಜೀವನವನ್ನೇ ಅರ್ಥ ಮಾಡಿಕೊಳ್ಳಬಹುದು. ಒಳಿತು ಕೆಡುಕುಗಳನ್ನು ಇದರಿಂದ ತಿಳಿದುಕೊಳ್ಳಬಹುದು ಎಂದರು.ಕಾಲದ ಮುಖ್ಯ ಲಕ್ಷಣ ಪರಿವರ್ತನೆ. ಯೋಗಿಗಳು ಕಾಲವನ್ನು ಮೀರಲು ಪ್ರಯತ್ನ ಮಾಡುತ್ತಾರೆ. ಶಾಶ್ವತವಾಗಿ ಉಳಿಯುವಂಥ, ಅವಿಕಾರವಾದ್ದನ್ನು ಬಯಸುತ್ತಾರೆ. ಕಾಲದ ಪರಿದಿಯ ಒಳಗಿದ್ದರೆ ಪರಿವರ್ತನೆ ಅನಿವಾರ‍್ಯ. ಕಾಲದ ಗುಟ್ಟನ್ನು ಅರಿತುಕೊಳ್ಳಲು ಸಾಧ್ಯವಾದರೆ ಜೀವನ ಸಾರ್ಥಕವಾಗುತ್ತದೆ ಎಂದು ವಿಶ್ಲೇಷಿಸಿದರು.ಅಸ್ಥಿ, ರಕ್ತ, ಮಜ್ಜೆ, ಚರ್ಮ, ಮೇಧಸ್ಸು, ಶುಕ್ರ, ಸ್ನಾಯು ಮುಂತಾದ ಸಪ್ತಧಾತುಗಳು ಕ್ರಮವಾಗಿ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳ ಮೂಲಕ ಸಂಕೇತವಾಗಿ ಪರಿಗಣಿಸಬಹುದು. ಅಂತೆಯೇ ಕುಟುಂಬದ ಸ್ಥಾನವನ್ನು ಕೂಡಾ ಗ್ರಹಗಳ ಮೂಲಕ ಹೇಳಬಹುದು. ಶಿವ, ಪಾರ್ವತಿ, ಸುಬ್ರಹ್ಮಣ್ಯ, ಕಾಳಿ, ಅವತಾರ ವಿಷ್ಣು, ಮಹಾವಿಷ್ಣು, ಲಕ್ಷ್ಮೀ, ಗಣಪತಿ, ಶಾಸ್ತಾ, ಆಂಜನೇಯ ಹೀಗೆ ಭಿನ್ನ ಗ್ರಹಗಳು ದೇವಸೂಚಕವೂ ಹೌದು ಎಂದರು.ಜ್ಞಾನದಷ್ಟು ಪವಿತ್ರ ಯಾವುದೂ ಇಲ್ಲ. ಅದಕ್ಕೆ ಸರಿ ಸಮಾನವಾದದ್ದು ಕೂಡಾ ಯಾವುದೂ ಇಲ್ಲ. ಮುತ್ತು ರತ್ನಕ್ಕಿಂತ ಅಕ್ಷರ ಸಂಪತ್ತು ಮೌಲಿಕವಾದದ್ದು. ಬದುಕನ್ನು ಬೆಳಗುವಂಥದ್ದು ಅರಿವಿನ ಸಂಪತ್ತು. ನಮ್ಮ ಪೂರ್ವಜರು ನೀಡಿದಂಥ ಜ್ಞಾನ ಮತ್ತಷ್ಟು ಅಮೂಲ್ಯ. ಇಂಥ ಜ್ಞಾನಸಂಪತ್ತು ಅಡಕಗೊಂಡಿರುವ ಓಲೆಗರಿಗಳು ಜ್ಞಾನಭಂಡಾರಗಳು. ಅವುಗಳನ್ನು ಉಳಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರಾಚ್ಯವಸ್ತು ತಜ್ಞ ಅಶೋಕ್ ಹೆದ್ಲಿ, ಶ್ರೀಮಠದ ಅಪೂರ್ವ ತಾಳೆಗರಿಗಳ ಸಂಗ್ರಹದ ಅನಾವರಣ ನೆರವೇರಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಶ್ರೀಮಠದ ಲೋಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲದ ಪದಾಧಿಕಾರಿಗಳಾದ ಕೇಶವ ಪ್ರಕಾಶ್ ಎಂ., ರುಕ್ಮಾವತಿ ರಾಮಚಂದ್ರ, ಸಾಗರ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರ್, ಕಾರ್ಯದರ್ಶಿ ಶ್ರೀನಾಥ ಸಾರಂಗ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ಬಿಡಿ ಪುಸ್ತಕ ಹಿಡಿ’ ಅಭಿಯಾನ
ಬಾಗಲಕೋಟೆ ಗಲಭೆಗೆ ಕೇಸರಿ ಪಡೆ ಗರಂ