ಜೀವ ಹೋದ್ರು ಭೂಮಿ ಬಿಟ್ಟು ಕೊಡಲ್ಲ

KannadaprabhaNewsNetwork |  
Published : May 23, 2025, 12:24 AM IST
ತಿಡಗುಂದಿ ಬಳಿ ನೂರಾರು ರೈತರು ಕಪ್ಪು ಬಟ್ಟೆ ಧರಿಸಿ ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಬಿಟ್ಟುಕೊಡುವುದಿಲ್ಲ ಧರಣಿ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಿಡಗುಂದಿ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಅದಕ್ಕಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ. ಆದರೆ, ಭೂಸ್ವಾಧೀನಕ್ಕೆ ವಿರೋಧಿಸಿದ ನೂರಾರು ರೈತರು ಕಪ್ಪು ಬಟ್ಟೆ ಧರಿಸಿ ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಿಟ್ಟುಕೊಡುವುದಿಲ್ಲ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಿಡಗುಂದಿ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಅದಕ್ಕಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ. ಆದರೆ, ಭೂಸ್ವಾಧೀನಕ್ಕೆ ವಿರೋಧಿಸಿದ ನೂರಾರು ರೈತರು ಕಪ್ಪು ಬಟ್ಟೆ ಧರಿಸಿ ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಿಟ್ಟುಕೊಡುವುದಿಲ್ಲ ಧರಣಿ ನಡೆಸಿದರು.

ತಿಡಗುಂದಿ ವ್ಯಾಪ್ತಿಯ ಕರ್ನಾಟಕ-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿ-೫೨ಕ್ಕೆ ಹೊಂದಿಕೊಂಡಿರುವ ೧೨೦೩ ಎಕರೆ ಕೃಷಿ ಭೂಮಿಯಲ್ಲಿ ರಾಜ್ಯ ಸರ್ಕಾರ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಒಳಗಾಗುವ ರೈತರಿಗೆ ೩ ಬಾರಿ ನೋಟಿಸ್ ನೀಡಿದ್ದು, ಮೇ ೧೯ ರಿಂದ ೨೯ ದಿನಗಳವರೆಗೆ ಭೂಮಿಗಳ ಸರ್ವೇ ಮಾಡಲು ಅಧಿಕಾರಿಕಾರಿಗಳು ಆಗಮಿಸುತ್ತಿದ್ದಾರೆ ಎಂದು ತಿಳಿದು, ೨೩೦ ಕ್ಕೂ ಅಧಿಕ ರೈತರು ಕಪ್ಪು ಬಟ್ಟೆ ಧರಿಸಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡ ಗಿರೀಶ ತಾಳಿಕೋಟಿ ಮಾತನಾಡಿ, ಈಗಾಗಲೇ ೨೩೦ ರೈತರ ಆಕ್ಷೇಪಣಾ ಪತ್ರವನ್ನು ರಾಜ್ಯ ಸರ್ಕಾರಕ್ಕೆ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸಲ್ಲಿಸಿ ಭೂಮಿಯನ್ನು ಬಿಟ್ಟಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ, ಆದರೂ ಇಂದು ಸರ್ವೇಗೆ ಆಗಮಿಸುತ್ತಿರುವುದು ಸರ್ಕಾರದ ರೈತವಿರೋಧಿ ನೀತಿಯನ್ನು ತೋರಿಸುತ್ತಿದೆ. ಜೀವ ಹೋದರು ಈ ಭೂಮಿ ಬಿಟ್ಟುಕೊಡುವ ಮಾತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಡಿವಾಳಪ್ಪ ತಿಲ್ಲಿಹಾಳ ಮಾತನಾಡಿ, ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಇಲ್ಲ ಮುಂದಿನ ಹೋರಾಟ ಉಗ್ರಸ್ವರೂಪ ಪಡೆಯುತ್ತಿದ್ದು, ಮುಂದೆ ನಡೆಯುವ ಸಂಭವನೀಯ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೆ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಈ ಗ್ರಾಮವೂ ಸಂಪೂರ್ಣ ಕೃಷಿ ಅವಲಂಭಿತವಾಗಿದ್ದು, ಲಿಂಬೆ, ದಾಳಿಂಬೆ, ದ್ರಾಕ್ಷಿ, ಕಬ್ಬು ಸೇರಿದಂತೆ ಹಲವಾರು ಹಣ್ಣು, ತರಕಾರಿ, ಮೆಕ್ಕೆಜೋಳ, ಹತ್ತಿ, ತೊಗರಿ ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಭೂಮಿ ವಶಕೊಡಿಸಿಕೊಂಡರೆ ರೈತರ ಬದುಕು ದುರ್ಬಲವಾಗಲಿದೆ. ಮುಂದಿನ ರೈತರ ಮಕ್ಕಳು ಬೀದಿ ಪಾಲಾಗಬೇಕಾಗುತ್ತದೆ, ಯಾವುದೇ ಯೋಜನೆಗಳು ರೈತರನ್ನ ಉದ್ದಾರ ಮಾಡುವಂತಿರಬೇಕು, ಒಕ್ಕಲೆಬ್ಬಿಸುವಂತಾಗಬಾರದು. ಈ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು, ಇಲ್ಲ ಕೃಷಿಗೆ ಯೋಗ್ಯವಲ್ಲದ ಭೂಮಿಗೆ ಈ ಯೋಜನೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಮನಗೌಡ ಪಾಟೀಲ, ಮಡಿವಾಳಪ್ಪ ತಿಲ್ಲಿಹಾಳ, ಗೋಪಾಲ ಭೋಸಲೆ, ಬಂದ್ಗಿಸಾಬ್ ವಾಲಿಕಾರ, ಸಿದ್ದರಾಯ ತಿಲ್ಲಿಹಾಳ, ಮದನಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಕಲ್ಲಪ್ಪ ಕುರಬರ ಸೇರಿದಂತೆ ಹಲವರು ಇದ್ದರು.

------

ಅನೇಕ ಪದವೀಧರರು ಬೇರೆಡೆಗೆ ನೌಕರಿ ಮಾಡುವುದನ್ನು ಬಿಟ್ಟು ಕೃಷಿ ಮಾಡಲು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದೇ ಕೈಗಾರಿಕಾ ಸಚಿವರು ನೀರಾವರಿ ಸಚಿವರಾಗಿದ್ದಾಗ ನಮ್ಮ ಭೂಮಿಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆಗ ಅವರನ್ನು ಸನ್ಮಾನಿಸಿದ್ದೇವು. ಆದರೆ ಈಗ ಅದೇ ನೀರನ್ನು ಎಲ್ಲಾ ರೈತರಿಗೂ ಬಿಟ್ಟು ಕೈಗಾರಿಕೆ ಮಾಡಲು ಹೊರಟ್ಟಿದ್ದಾರೆ, ರೈತರಿಗಿಂತ ಇವರಿಗೆ ಕೈಗಾರಿಕೆಯೇ ಮುಖ್ಯವಾಯಿತೇ?. ಫಲವತ್ತಾದ ಕೃಷಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಎಲ್ಲ ರೈತರು ಕುಟುಂಬ ಸಮೇತ ಗುಳೆ ಹೋಗಬೇಕಾಗುತ್ತದೆ.

ಈಶ್ವರಪ್ಪ ಬೆಳ್ಳುಂಡಗಿ, ಹಿರಿಯ ರೈತ

ಬಾಕ್ಸ್‌

ಅಧಿಕಾರಿಗಳ ಜೊತೆ ರೈತರ ವಾಗ್ವಾದ

ತಿಳವಳಿಕೆ ಪತ್ರದ ಪ್ರಕಾರ ಅಳತೆ ಕಾರ್ಯ (ಜೆಎಂಸಿ) ಮಾಡಲು ಬಂದ ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧಿನಾಧಿಕಾರಿಗಳೊಂದಿಗೆ ತಿಡಗುಂದಿ ರೈತರು ವಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಈ ವೇಳೆ ಅಧಿಕಾರಿಗಳು ಮತ್ತು ರೈತರ ಮಧ್ಯೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದವು ನಡೆಯಿತು. ಅಳತೆ ಮಾಡಲು ವಿರೋಧ ವ್ಯಕ್ತಪಡಿಸಿ ಬಿಟ್ಟು ಹೋಗುವಂತೆ ರೈತರು ಅಧಿಕಾರಿಗಳ ವಿರುದ್ಧ ಹಠಹಿಡಿದರು. ಕೊನೆಗೂ ರೈತರ ವಿರೋಧಕ್ಕೆ ಮಣಿದ ಅಧಿಕಾರಿಗಳು ಅನಿವಾರ್ಯವಾಗಿ ಸ್ಥಳದಿಂದ ಕಾಲ್ಕಿತ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ