ಬೆಂಗಳೂರು : ಹುಟ್ಟು, ಸಾವಿನ ನಡುವೆ ನಾವೆಷ್ಟು ಸಮಾಜಮುಖಿಯಾಗಿ ಬದುಕಿದ್ದೇವೆ, ಜೀವನದಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯ. ಆಗ ಮಾತ್ರ ತಮ್ಮ ಬದುಕು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 70 ಮಂದಿ ಸಾಧಕರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಸಾಧಕರೆಲ್ಲರೂ ಅವರ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ತೀರ್ಮಾನ ಮಾಡಿದೆ. ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಗಳಿಸಿದ ಸಂಪತ್ತು ಕ್ಷಣಿಕ. ಆದರೆ ನಾವು ಪಡೆದ ಜ್ಞಾನ, ಮಾಡಿದ ಸಾಧನೆ ಶಾಶ್ವತ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ಅವಕಾಶ ಪಡೆದವನು ಅದೃಷ್ಟವಂತ, ಅವಕಾಶ ಸೃಷ್ಟಿಸಿಕೊಳ್ಳುವವನು ಬುದ್ದಿವಂತ. ಅನೇಕ ಸಾಧಕರ ಜ್ಞಾನದ ಬಲದಿಂದ ಕರ್ನಾಟಕಕ್ಕೆ ಹೆಸರು ಬಂದಿದೆ. ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕಂತಹ ಅವಕಾಶ ಬಳಸಿಕೊಂಡು ಸಾಧನೆ ಮಾಡಿದವರು ಇಂದು ನಮ್ಮ ಮುಂದಿದ್ದಾರೆ. ಕನ್ನಡವನ್ನು ಉಸಿರಾಡಿದ, ಬೆಳಗಿದ, ಕನ್ನಡದಲ್ಲಿ ಬದುಕಿದ ಸಾಧಕರಿವರು ಎಂದರು.
ನಮ್ಮ ನಡುವೆ ಇನ್ನೂ ಅನೇಕ ಸಾಧಕರಿದ್ದಾರೆ. ಆದರೆ ಆಯಾ ಆಚರಣೆ ವರ್ಷಕ್ಕೆ ತಕ್ಕಂತೆ ಪ್ರಶಸ್ತಿ ನೀಡಬೇಕು ಎನ್ನುವ ನಿಯಮವನ್ನು ಮಾಡಿಕೊಂಡಿರುವ ಕಾರಣಕ್ಕೆ ಈ ಬಾರಿ 70 ಸಾಧಕರನ್ನು ಗುರುತಿಸಲಾಗಿದೆ. ಮುಂದಿನ ವರ್ಷ 71 ಜನ ಸಾಧಕರನ್ನು ಪರಿಗಣಿಸಲಾಗುವುದು. ಎಲ್ಲಾ ಸಮುದಾಯ, ಕ್ಷೇತ್ರ, ಜಿಲ್ಲೆಗಳ ಸಾಧಕರನ್ನು ಪರಿಗಣಿಸಲಾಗಿದೆ. ಯಾವುದೇ ಅರ್ಜಿ ಆಹ್ವಾನ ಮಾಡದೆ ನಿಜವಾದ ಸಾಧಕರನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕುಮಾರ್, ನಿರ್ದೇಶಕಿ ಗಾಯತ್ರಿ ಮತ್ತಿತರರು ಇದ್ದರು.
ಅರ್ಜಿಗಳನ್ನು ಹಾಕಿ ತೆಗೆದುಕೊಳ್ಳುವ ಪ್ರಶಸ್ತಿ ಇದಲ್ಲ. ಅರ್ಹರಾದವರನ್ನು ಹುಡುಕಿ ಒಂದು ಘನತೆಯನ್ನು ಈ ಬಿರುದು, ಸನ್ಮಾನಕ್ಕೆ ಕೊಟ್ಟಂತಹ ಸರ್ಕಾರಕ್ಕೆ ಧನ್ಯವಾದಗಳು. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವಿಶ್ವ ಮಾನವನ ಸಂದೇಶವನ್ನು ಸಂಭ್ರಮಿಸುವುದೇ ಕನ್ನಡದ ಸಂಭ್ರಮ. ಜನರ ಪ್ರೀತಿಯಿಂದ ಈ ಪುರಸ್ಕಾರ ಸಿಕ್ಕಿದೆ. ನಾನು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅದರ ತಾಯಿ ಬೇರು ಕನ್ನಡ ಮತ್ತು ಕರ್ನಾಟಕದ್ದು. ನಮ್ಮ ನೆಲದಲ್ಲಿ ಸಹಿಷ್ಣುತೆಗೆ, ಎಲ್ಲ ಧರ್ಮವನ್ನು, ಎಲ್ಲರನ್ನು ಅಪ್ಪಿಕೊಳ್ಳುವ ಸೃಜನತೆಗೆ ಕುವೆಂಪು ಬರೆದ ವಿಶ್ವಮಾನವ ಸಂದೇಶ ಮಾರ್ಗದರ್ಶಿ ಎಂದು ಹಿರಿಯ ನಟ ಪ್ರಕಾಶ್ ರೈ ಹೇಳಿದರು.