ಅಣಲಗಾರ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಜ್ಞಾನಯಜ್ಞ ಸಪ್ತಾಹದ ಸಮಾರೋಪ
ಧರ್ಮ ಮತ್ತು ಭಗವಂತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧರ್ಮಾಚರಣೆಯ ಮೂಲಕ ನಿರಂತರವಾಗಿ ಭಗವಂತನ ಆರಾಧನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸ್ವರ್ಣವಲ್ಲೀ ಮಠ, ಕರಡೊಳ್ಳಿಯ ಗೋವರ್ಧನ ಗೋಶಾಲೆಗಳ ಸಹಯೋಗದಲ್ಲಿ ನಡೆದ ಶ್ರೀಮದ್ ಭಾಗವತ ಜ್ಞಾನಯಜ್ಞ ಸಪ್ತಾಹದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಹಾಭಾರತ ಧರ್ಮವನ್ನು ಸಾರುತ್ತದೆ. ಭಾಗವತ ಭಗವತ್ ತತ್ವವನ್ನು ಬೋಧಿಸುತ್ತದೆ. ಭಾಗವತದಲ್ಲಿ ಶ್ರೀಕೃಷ್ಣ ಅನೇಕ ಬಾರಿ ವಿಶ್ವರೂಪದರ್ಶನ ಮಾಡಿದ ಉಲ್ಲೇಖದೊಂದಿಗೆ ವರ್ಣನೆ ಇದೆ. ಭಾಗವತವನ್ನು ನಿತ್ಯವೂ ಓದುವ, ಮನನ ಮಾಡುವುದನ್ನು ರೂಢಿಸಿಕೊಂಡರೆ ವಿಶೇಷ ಪುಣ್ಯ ಲಭಿಸುತ್ತದೆ.
ಸ್ವರ್ಣವಲ್ಲೀ ಮಠದ ಕಿರಿಯ ಯತಿಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ವಾಂಸರಾದ ವಾಸುದೇವ ಭಟ್ಟ ಹಂದಲಸು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೆಪಾಲ ವೇದಿಕೆಯಲ್ಲಿದ್ದರು.
ವೈದಿಕ ಸಭೆಯಲ್ಲಿ ೭ ದಿನಗಳ ಕಾಲ ಭಾಗವತದ ಪ್ರವಚನ ನೀಡಿದ ಡಾ. ವಾಸುದೇವ ಭಟ್ಟ ಹಂದಲಸು ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಸಪ್ತಾಹದ ಸಮಾರೋಪದ ಅಂಗವಾಗಿ ಶ್ರೀಕೃಷ್ಣ ಮೂಲಮಂತ್ರ ಹವನ ನಡೆಯಿತು.