ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆಯಿಂದ ಜೀವನ ಸಾರ್ಥಕ

KannadaprabhaNewsNetwork |  
Published : Jan 19, 2025, 02:16 AM IST
ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆಯಿಂದ ಜೀವನ ಸಾರ್ಥಕ : ವಿಧುಶೇಖರ ಭಾರತಿ ಶ್ರೀ | Kannada Prabha

ಸಾರಾಂಶ

ಮನುಷ್ಯನ ಜೀವನ ಸಾರ್ಥಕವಾಗಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮನುಷ್ಯನ ಜೀವನ ಸಾರ್ಥಕವಾಗಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ತಿಳಿಸಿದರು. ನಗರದ ಕೃಷಿ ರಾಜೇಂದ್ರ ಬಡಾವಣೆಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ರಜತ ಮಹೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜೀವನದಲ್ಲಿ ವಿದ್ಯಾಭ್ಯಾಸದ ಸಂಪಾದನೆ ಅಷ್ಟೇ ಅಲ್ಲ, ಧರ್ಮ ಆಚರಣೆಯ ಮೂಲಕ ನಾವು ಪುಣ್ಯ ಸಂಪಾದನೆ ಮಾಡಬೇಕು. ನಾವು ಮಾಡಿದ ಪುಣ್ಯ ಜನ್ಮ ಜನ್ಮಕ್ಕೂ ಸೀಮಿತವಾಗಿರುತ್ತದೆ. ಯಾವತ್ತೂ ಕೂಡ ಧಾರ್ಮಿಕ ಕಾರ್ಯವಿಳಂಬ ಮಾಡಬಾರದು. ಚಿಕ್ಕ ವಯಸ್ಸಿನಿಂದಲೂ ಧಾರ್ಮಿಕ ಸಂಸ್ಕಾರ ರೂಢಿಸಿಕೊಂಡರೆ ಧಾರ್ಮಿಕತೆ ನಮ್ಮನ್ನು ಎಂತಹ ಪರಿಸ್ಥಿತಿಯಲ್ಲಿ ಕೂಡ ದೃಢವನ್ನಾಗಿಸುತ್ತದೆ ಇದು ಭಗವದ್ಗೀತೆಯ ಉಪನಿಷತ್ತುಗಳ ಸಾರವಾಗಿದೆ. ೧೨೦೦ ವರ್ಷಗಳ ಹಿಂದೆ ಭಗವಂತನ ರೂಪದಲ್ಲಿ ಶಂಕರರು ಅನೇಕ ಉಪದೇಶ ಮಾಡಿದ್ದಾರೆ. ಭಗವತ್ಪಾದಕರಾದ ಶಂಕರಾಚಾರ್ಯರ ವಿಚಾರ ಅವರು ತೋರಿಸಿದ ಮಾರ್ಗ ನಾವೆಲ್ಲರೂ ಅನುಸರಿಸಬೇಕು. ಲೌಕಿಕ ಜೀವನದಲ್ಲಿ ಲೆಕ್ಕ ಸರಿ ಇರಬೇಕು ಧರ್ಮ ಆಚರಣೆಗೆ ಸಮಯ ಮೀಸಲಿಡಬೇಕು. ಸಮಯದ ಜೊತೆ ಶ್ರದ್ಧೆ ಎಂಬುದು ಮುಖ್ಯ. ಶಂಕರಮಠ ಸ್ಥಾಪನೆ ಉದ್ದೇಶ ಧಾರ್ಮಿಕ ವಾತಾವರಣ ನಿರ್ಮಿಸಬೇಕು. ಜಗದ್ಗುರುಗಳ ಅಮೃತ ಹಸ್ತದಿಂದ ಶ್ರೀ ಶಾರದಾಂಬ ದೇವಿ, ಶ್ರೀಶಕ್ತಿ ಗಣಪತಿಯ ದೇವಾಲಯ ಉದ್ಘಾಟನೆಗೊಂಡಿದೆ. ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಬರಬೇಕು, ಇಲ್ಲಿನ ಭಕ್ತರಿಗೆ ಶೃಂಗೇರಿ ಮಠದ ಜೊತೆ ಪ್ರಾಚೀನ ಕಾಲದಿಂದಲೂ ಗುರು ಶಿಷ್ಯರ ಸಂಬಂಧವಿದೆ. ಪ್ರತಿಯೊಬ್ಬರು ಧಾರ್ಮಿಕ ಜೀವನ ಆಚರಣೆ, ಉತ್ತಮ ಕೆಲಸ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಧರ್ಮಾಧಿಕಾರಿ ಬಿ.ಆರ್ ಶ್ರೀಕಂಠ ದಂಪತಿಗಳು ಧೂಳಿ ಪಾದಪೂಜೆ ನೆರವೇರಿಸಿದರು. ಶ್ರೀಗಳವರಿಂದ ಶ್ರೀಶಾರದಾ ಚಂದ್ರ ಮೌಳೀಶ್ವರ ಪೂಜೆ, ಸುಹಾಸಿನಿಯವರಿಂದ ಶ್ರೀ ಲಲಿತ ಸಹಸ್ರನಾಮ, ಅಖಂಡ ಪಾರಾಯಣ, ಲಕ್ಷಾರ್ಚನೆ, ಶತಚಂಡಿ ಮಹಾಯಾಗದ ಪೂರ್ಣಹುತಿ, ಶ್ರೀಗಳವರಿಂದ ತೀರ್ಥ ಮತ್ತು ಫಲ ಮಂತ್ರಾಕ್ಷತೆ ನಂತರ ಮಹಾಪ್ರಸಾದ ನಡೆಯಿತು. ಕಾರ್ಯಕ್ರಮದಲ್ಲಿ ವೇ.ಮೂ. ವಿಜಯೇಂದ್ರ ಭಟ್, ವೆಂಕಟಚಲಭಟ್ ರವರಿಂದ ವೇದ ನಡೆಯಿತು. ಸುಮಿತ ಶ್ರೀನಿವಾಸ್ ತಂಡದವರಿಂದ ಪ್ರಾರ್ಥನೆ, ಶ್ರೀನಾಥ್ ಸ್ವಾಗತಿಸಿದರು, ಉಮೇಶ್ ಪ್ರಾಸ್ತಾನಿಕ ನುಡಿಗೈದರು. ರಾಜಿವಲೋಚನ ವಂದಿಸಿದರು. ತಿಪಟೂರು, ತುರುವೇಕೆರೆ, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ರಜತ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ