ಹೊನ್ನಾವರ: ನಾವು ಬದುಕಲು ನೂರೆಂಟು ದಾರಿಗಳಿವೆ. ತರಗತಿ ಕೋಣೆಯಲ್ಲಿ ಕಲಿಯುವುದು ಮಾತ್ರ ಕಲಿಕೆಯಲ್ಲ. ಸಮಾಜದ ನಡುವೆ ಕಲಿಯಬೇಕಾದ ನೂರೆಂಟು ಸಂಗತಿಗಳಿವೆ. ಸಮಾಜದ ಋಣ ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಹೇಳಿದರು.
ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ಮಾಯಾ ಬಂಧನದಲ್ಲಿ ಸಿಲುಕಿದ್ದಾರೆ. ಮೋಜು-ಮಸ್ತಿ, ಪ್ರವಾಸಗಳಲ್ಲಿ ಅವರು ಮೈಮರೆಯುತ್ತಿದ್ದಾರೆ. ನಮ್ಮ ಹದಿಹರೆಯವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಕೆಲಸ ಮಾಡಲು ನಾವು ಸಿದ್ಧರಿರಬೇಕು. ವೃತ್ತಿಯಲ್ಲಿ ಆಸಕ್ತಿ, ತನ್ಮಯತೆ, ತಾಳ್ಮೆ, ಶ್ರದ್ಧೆ ಇದ್ದರೆ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಡಿ.ಎಲ್. ಹೆಬ್ಬಾರ ಮಾತನಾಡಿ, ವಂದೂರಿನಲ್ಲಿ ಒಂದು ವಾರಗಳ ಕಾಲ ಇದ್ದು, ರಸ್ತೆ ರಿಪೇರಿ, ಗಟಾರ ಸ್ವಚ್ಛತೆ, ದೇವಾಲಯ ಆವರಣ, ಬಸ್ ನಿಲ್ದಾಣ ಶುಚಿಗೊಳಿಸಿದ ವಿದ್ಯಾರ್ಥಿಗಳ ಶ್ರಮದಾನ ಶ್ಲಾಘಿಸಿದರು.ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ನಾಗರಾಜ ಅಪಗಾಲ ಮಾತನಾಡಿ, ಇಂದು ನಾವು ಯಂತ್ರಗಳನ್ನು ಶೋಧಿಸಿದ್ದೇವೆ. ಆದರೆ ಮಾನವನ ಶರೀರವೆಂಬ ಯಂತ್ರಕ್ಕೆ ಬೊಜ್ಜು ಬಂದಿದೆ. ನಮ್ಮ ಒಳಗಡೆ ಪರಿವರ್ತನೆ ಆಗದ ಹೊರತು ಯಾವುದೇ ನಿಯಮಗಳಿಂದ ಪ್ರಯೋಜನವಿಲ್ಲ ಎಂದರು.
ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಗ್ರಾಪಂ ಕಾರ್ಯ ವಿಧಾನಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಸಹ ಶಿಬಿರಾಧಿಕಾರಿ ಪ್ರಶಾಂತ ಮೂಡಲಮನೆ, ಮುಖ್ಯಾಧ್ಯಾಪಕ ಶಂಕರ ನಾಯ್ಕ, ಶಾಲಾ ಎಸ್.ಡಿಎಂಸಿ ಅಧ್ಯಕ್ಷ ಈರುಗೌಡ ಉಪಸ್ಥಿತರಿದ್ದರು.