ಜಮಖಂಡಿ: ಪವಾಡ ಪುರುಷರು ಹಾಗೂ ಸತ್ಪುರುಷರ ಆಶೀರ್ವಾದ ನಮ್ಮ ಬದುಕನ್ನು ಉದ್ಧಾರ ಮಾಡುತ್ತದೆ. ದೈವಾನುಗ್ರಹಕ್ಕಾಗಿ ನಾವು ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಹಿರಿಯ ಚಲನಚಿತ್ರ ನಟ ಶ್ರೀಧರ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪವಾಡ ಪುರುಷರು ಹಾಗೂ ಸತ್ಪುರುಷರ ಆಶೀರ್ವಾದ ನಮ್ಮ ಬದುಕನ್ನು ಉದ್ಧಾರ ಮಾಡುತ್ತದೆ. ದೈವಾನುಗ್ರಹಕ್ಕಾಗಿ ನಾವು ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಹಿರಿಯ ಚಲನಚಿತ್ರ ನಟ ಶ್ರೀಧರ ಹೇಳಿದರು.ತಾಲೂಕಿನ ಮೈಗೂರ ಗ್ರಾಮದ ಗುರುದೇವಾಶ್ರಮದ ಆವರಣದಲ್ಲಿ ಶಿವಾನಂದ ಮಠದ ಜಾತ್ರಾ ಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಮೈಗೂರ ಪವಾಡ ಪುರುಷ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಭಕ್ತಿಯಿಂದ ಕೇಳಿದ್ದನ್ನು ನೀಡಲು ಪರಮಾತ್ಮ ಸ್ವಲ್ಪ ವಿಳಂಬ ಮಾಡಬಹುದು, ಆದರೆ ಸದ್ಗುರುಗಳು ಎಂದಿಗೂ ವಿಳಂಬ ಮಾಡುವುದಿಲ್ಲ. ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಮಹಾಗುರುಗಳಿಗಿದೆ. ಮನುಷ್ಯ ಜನ್ಮ ಪಡೆಯುವುದೇ ದೊಡ್ಡ ಪುಣ್ಯ. ಅಂತಹ ಪುಣ್ಯದ ಫಲವಾಗಿ ನಮಗೆ ಮಹಾಪುರುಷರ ಸನ್ನಿಧಿಯಲ್ಲಿ ಇರುವ ಭಾಗ್ಯ ಸಿಗುತ್ತದೆ. ಜೀವನದ ಕಷ್ಟ-ನೋವುಗಳನ್ನು ನಿವಾರಿಸುವ ಸಾಮರ್ಥ್ಯ ಸತ್ಪುರುಷರಿಗಿದೆ ಎಂದು ಅಭಿಪ್ರಾಯಪಟ್ಟರು. ನಟಿ ಅನು ಪ್ರಭಾಕರ ಮತ್ತು ಭವ್ಯಾ ಮಾತನಾಡಿ, ಪವಾಡ ಪುರುಷರು ನಡೆದಾಡಿದ ನೆಲವೇ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಭಾರತ ವಿವಿಧ ಜಾತಿ, ಭಾಷೆಗಳಿದ್ದರೂ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿಯ ಆಧ್ಯಾತ್ಮಿಕ ಚಿಂತನೆಗಳು ಸಮಾಜದಲ್ಲಿ ಶಾಂತಿ ನೆಲೆಸಲು ಮೂಲ ಕಾರಣವಾಗಿವೆ ಎಂದು ತಿಳಿಸಿದರು.
ಶ್ರೀಮಠದ ಗುರುಪ್ರಸಾದ ಸ್ವಾಮೀಜಿ ಮಾತನಾಡಿದರು. ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಬಾಲ್ಕಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯ ಪರಪ್ಪ ಕಕಮರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೆಂಗಳೂರಿನ ಪಿಎಸ್‌ಐ ಕುಮಾರ ಮೂಕನವರ, ಮಲ್ಲು ಬಿ. ಪಾಟೀಲ, ಸಂಜು ಖೋತ, ಮುತ್ತಣ್ಣ ಮೂಕನವರ, ಭೂಪಾಲ ಸದಲಗಿ, ರಾಜೇಶ್ವರಿ ಹಿರೇಮಠ, ರಾಮ ಅಂಬಿ, ಅಡವಯ್ಯ ಹಿರೇಮಠ, ಮಹಾದೇವ ಭೀಮನಹಳ್ಳಿ, ಧರನೇಶ ನ್ಯಾಮಗೌಡ, ಶಿವಪ್ರಭು ಭೀಮನಹಳ್ಳಿ ಸಂಗೊಳ್ಳಿ ಮಠಪತಿ ಇತರರು ಇದ್ದರು.ಶಿಕ್ಷಕ ಅಪ್ಪು ಅಂಬಿ ಸ್ವಾಗತಿಸಿದರು, ಶಿಕ್ಷಕ ಎಂ.ಡಿ. ತೇಲಸಂಗ ನಿರೂಪಿಸಿದರು.
ಮನಸೂರೆಗೊಂಡ ನಾಟಕ: ಬಳ್ಳಾರಿ ಜಿಲ್ಲೆಯ ಶಿರಗೇರಿಯ ಧಾತ್ರಿ ತಂಡದವರು ಪ್ರದರ್ಶಿಸಿದ, ಶಿಶುಕವಿ ಪ್ರಕಾಶ ಮಠಪತಿ ರಚನೆಯ ಮೈಗೂರ ಪವಾಡ ಪುರುಷ ನಾಟಕ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಲಿಂ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಜೀವನಾಧಾರಿತ ಈ ನಾಟಕ ಭಕ್ತಿ ಭಾವ ಮೂಡಿಸಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.