ಕನ್ನಡಪ್ರಭ ವಾರ್ತೆ ​ಮುದ್ದೇಬಿಹಾಳ

ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರು ರಾಜಕೀಯ ಜೀವನದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 9ರಂದು ಬೆಳಗ್ಗೆ11ಗಂಟೆಗೆ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಬೃಹತ್ ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾವೇಶಕ್ಕೆ ರಾಜ್ಯದಾದ್ಯಂತ 15 ರಿಂದ 20 ಲಕ್ಷ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

​ಭಾನುವಾರ ಸಂಜೆ ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ ಸುಧೀರ್ಘ ಕಾಲ ಜನಸೇವೆ ಮಾಡಿದ್ದಾರೆ. ರೈತರಿಗೆ ಬೆಲೆ ಸಿಗದಿದ್ದಾಗ ಏಕಾಂಗಿಯಾಗಿ ಹೋರಾಡಿ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ರೈತರ ಧ್ವನಿ ತಲುಪಿಸಿದ ಮಹಾನ್ ನಾಯಕರು. ಇಂತಹ ನಾಯಕನ ಗೌರವಾರ್ಥವಾಗಿ ಎಲ್ಲಾ ಮಠಾಧೀಶರು ಹಾಗೂ ಪಕ್ಷಾತೀತವಾಗಿ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಯಡಿಯೂರಪ್ಪನವರ ಕಾರ್ಯವೈಖರಿ ಮತ್ತು ಹೋರಾಟದ ಬದುಕನ್ನು ಸ್ವತಃ ಸಿದ್ದರಾಮಯ್ಯನವರೇ ಹೊಗಳಿದ್ದಾರೆ. ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ಯಡಿಯೂರಪ್ಪನವರ ಸಂಘಟನಾ ಶಕ್ತಿಯನ್ನು ಸಿದ್ದರಾಮಯ್ಯನವರು ಶ್ಲಾಘಿಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕದಲ್ಲಿ ಹಜ್ ಭವನ ನಿರ್ಮಿಸುವ ಮೂಲಕ ಸರ್ವಧರ್ಮೀಯರನ್ನು ಸಮಾನವಾಗಿ ಕಂಡಿದ್ದನ್ನು ವಿರೋಧ ಪಕ್ಷದ ನಾಯಕರೂ ಮೆಚ್ಚಿಕೊಂಡಿದ್ದಾರೆ.

ಯಡಿಯೂರಪ್ಪನವರ ಮುಖ್ಯಮಂತ್ರಿ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಶೂನ್ಯ ಬಡ್ಡಿ ದರದಲ್ಲಿ ಸಾಲ, ನೇಕಾರರಿಗೆ ವಿದ್ಯುತ್ ಸಬ್ಸಿಡಿ ಹಾಗೂ ವಿಜಯಪುರ ಜಿಲ್ಲೆಯ 124 ಕೆರೆ ತುಂಬಿಸುವ ಯೋಜನೆ ಮತ್ತು ಚಿಮ್ಮಲಗಿ ಏತನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ಮುದ್ದೇಬಿಹಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಈ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ನನಗೆ ಬಿಜೆಪಿ ಟಿಕೆಟ್ ನೀಡಿ, ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಬೆಳೆಸಿದ ಯಡಿಯೂರಪ್ಪನವರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪ್ರಭು ಕಡಿ, ಎಂ.ಎಸ್.ಪಾಟೀಲ, ಮಲೆಕೇದ್ರಗೌಡ ಪಾಟೀಲ, ಕೆಂಚಪ್ಪ ಬಿರಾದಾರ, ಚನ್ನಬಸಪ್ಪ ಚೆನ್ನಿಗಾವಿಶೆಟ್ರು, ಮಲ್ಲಯ್ಯ ಬಿರಾದಾರ, ಗಿರೀಶಗೌಡ ಪಾಟೀಲ, ಮದನಸ್ವಾಮಿ ಹಿರೇಮಠ, ಮುತ್ತುಣ್ಣ ಹುಗಿ, ಪ್ರೇಮಸಿಂಗ್ ರಾಠೋಡ, ಸೋಮಗೌಡ ಬಿರಾದಾರ, ಮಹಾಂತಗೌಡ ಗಂಗನಗೌಡರ, ವೀರೇಶ ಪಾಟೀಲ, ಎಸ್.ಎಸ್.ಶಿವಣಗಿ, ಸಿದ್ದರಾಜ ಹೊಳಿ, ಸಂಗನಗೌಡ ಪಾಟೀಲ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಅನಿಲ ನಾಯಕ ಸೇರಿ ಅನೇಕರು ಉಪಸ್ಥಿತರಿದ್ದರು.