ಕನ್ನಡಪ್ರಭ ವಾರ್ತೆ ​ಮುದ್ದೇಬಿಹಾಳ

ದೇಶದ ಬೆನ್ನೆಲುಬಾದ ರೈತ ಇಂದು ಸಾಲ ಮತ್ತು ಆತ್ಮಹತ್ಯೆ ಸಂಕೋಲೆಯಲ್ಲಿ ಸಿಲುಕಿ ನಲುಗುತ್ತಿದ್ದಾನೆ. ರೈತರ ಬದುಕು ಹಸನಾಗಲು ಬಲಿಷ್ಠ ಸಂಘಟನೆ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬರುವ ಮೇ 8ರಂದು ವಿಜಯಪುರದಲ್ಲಿ 4ನೇ ಬೃಹತ್ ರೈತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

​ಭಾನುವಾರ ಪಟ್ಟಣದ ಪಂಜರಹುಲಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 8ರಂದು ಬೆಳಗ್ಗೆ 10 ಗಂಟೆಗೆ ವಿಜಯಪುರದ ದರಬಾರ್ ಗ್ರೌಂಡ್ ಸ್ಟೇಶನ್ ಮುಖ್ಯ ರಸ್ತೆಯಲ್ಲಿ ಈ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದ ವಿವಿಧ ಮಠಾಧೀಶರು ಹಾಗೂ ವಿವಿಧೆಡೆಯಿಂದ ಸುಮಾರು 1 ಲಕ್ಷ ರೈತರು ಈ ಮಹಾ ಸಂಗಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುದ್ದೇಬಿಹಾಳ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.​ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆಗಳಿಂದ ಸ್ಪಿರಿಟ್, ವಿದ್ಯುತ್ ಹಾಗೂ ಮದ್ಯದ ಮೂಲಕ ವರ್ಷಕ್ಕೆ 50 ಸಾವಿರ ಕೋಟಿಗೂ ಅಧಿಕ ಆದಾಯ ಬರುತ್ತಿದ್ದರೂ ರೈತರಿಗೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಕಬ್ಬಿಗೆ ಪ್ರತಿ ಟನ್‌ಗೆ ₹ 5,500 ಬೆಲೆ ನೀಡಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಹಿಂದೆ ₹ 20 ಸಾವಿರಕ್ಕೆ ಸಿಗುತ್ತಿದ್ದ ಟಿಸಿ ಇಂದು ₹ 3 ಲಕ್ಷ ಆಗಿದೆ. ಇದು ರೈತರಿಗೆ ಆಘಾತಕಾರಿ ವಿಷಯವಾಗಿದೆ. ಆಲಮಟ್ಟಿ ಅಣೆಕಟ್ಟನ್ನು 524 ಮೀ. ಎತ್ತರಕ್ಕೆ ಏರಿಸುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ನಾಗರಬೆಟ್ಟದ ಏತನೀರಾವರಿ ಯೋಜನೆ ಶೇ.90ರಷ್ಟು ಮುಗಿದಿದ್ದರೂ ಇಂದಿಗೂ ಚಾಲನೆ ಸಿಕ್ಕಿಲ್ಲ. ಈ ಯೋಜನೆಗೆ ನೀಡಿದ ಒಂದು ತಿಂಗಳ ಕಾಲಾವಧಿಯೊಳಗೆ ಪೂರ್ಣಗೊಳ್ಳದಿದ್ದರೆ, ಆಲಮಟ್ಟಿಯ ಕೆಬಿಜೆಎನ್ಎಲ್ ಕಚೇರಿ ಹಾಗೂ ಶಾಸಕರ ಮನೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.​ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಬ್ಬು, ಈರುಳ್ಳಿ, ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘದ ಶಾಖೆಗಳು ಆರಂಭವಾಗುವ ಮೂಲಕ ಸಂಘಟನೆ ಬಲಗೊಳ್ಳಬೇಕು. ಸಮಾವೇಶದಲ್ಲಿ ರಾಜ್ಯದ 11 ಜನ ಪ್ರಗತಿಪರ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.​ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿದರು.​ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಮಹಾಂತಗೌಡ ಬಿರಾದಾರ (ವಕೀಲರು), ಸೋಮು ಬಿರಾದಾರ, ಮುತ್ತು ಹಿರೇಮಠ, ಅಪ್ಪುಗೌಡ ಪಾಟೀಲ, ಶಿವನಗೌಡ ಗೌಡರ, ಈಶ್ವರ ಬಡಿಗೇರ, ಶಿವರಾಯ ಪ್ಯಾಟಿ ಸೇರಿದಂತೆ ಮುದ್ದೇಬಿಹಾಳ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.