ಸರ್ವತೋಮುಖ ಅಭಿವೃದ್ಧಿಯಿಂದ ಬದುಕು ಪರಿಪೂರ್ಣ: ಡಾ.ಕೆ. ಅನಂತರಾಮು

KannadaprabhaNewsNetwork |  
Published : Aug 04, 2025, 12:15 AM IST
49 | Kannada Prabha

ಸಾರಾಂಶ

ಕನ್ನಡ ಪ್ರೇಮ ನಮಗೆ ಇರಬೇಕು. ಕನ್ನಡ ಸಂರಕ್ಷಣೆಯ ವಿಷಯದಲ್ಲಿ ವಚನಕಾರರ ಪಾತ್ರ ದೊಡ್ಡದು. ಜನ ಸಾಮಾನ್ಯರಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಬೇಕು ಎನ್ನುವ ಉದ್ದೇಶದಿಂದ ಹುಟ್ಟಿಕೊಂಡ ನಮ್ಮ ಶಿವಶರಣರು ವಚನಗಳ ರಚನೆಯ ಜೊತೆಜೊತೆಗೇ ಕನ್ನಡದ ಸಂರಕ್ಷಣೆಯನ್ನೂ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮನುಷ್ಯನ ಬದುಕಿಗೆ ಪರಿಪೂರ್ಣತೆ ಬರುವುದು ಸರ್ವತೋಮುಖ ಅಭಿವೃದ್ಧಿ ಇದ್ದಾಗ ಮಾತ್ರ. ವಿದ್ಯೆ ಸಂಪತ್ತು ಅಮೂಲ್ಯವಾದದ್ದು. ಅದರ ಜೊತೆಗೆ ಮಾನವೀಯ ಗುಣಗಳೂ ಬೇಕು ಎಂದು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರೀಡಾ ಚಟುವಟಿಕೆಗಳ ವೇದಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಪ್ರೇಮ ನಮಗೆ ಇರಬೇಕು. ಕನ್ನಡ ಸಂರಕ್ಷಣೆಯ ವಿಷಯದಲ್ಲಿ ವಚನಕಾರರ ಪಾತ್ರ ದೊಡ್ಡದು. ಜನ ಸಾಮಾನ್ಯರಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಬೇಕು ಎನ್ನುವ ಉದ್ದೇಶದಿಂದ ಹುಟ್ಟಿಕೊಂಡ ನಮ್ಮ ಶಿವಶರಣರು ವಚನಗಳ ರಚನೆಯ ಜೊತೆಜೊತೆಗೇ ಕನ್ನಡದ ಸಂರಕ್ಷಣೆಯನ್ನೂ ಮಾಡಿದರು. ಜೆಎಸ್‌ಎಸ್‌ ಸಂಸ್ಥೆ ಕೂಡ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕೆ ಬಹಳ ಶ್ರಮಿಸಿದೆ ಎಂದರು.

ಜೆಎಸ್‌ಎಸ್‌ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶಾಲಾ ಕಾಲೇಜುಗಳು ಕೇವಲ ಪದವೀಧರರನ್ನು ತಯಾರಿಸುವ ಕಾರ್ಖಾನೆಗಳಾಗದೆ, ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುವ ಮಾನವ ಸಂಪನ್ಮೂಲ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್‌.ಸಿ.ಸಿ, ಎನ್‌.ಎಸ್‌.ಎಸ್‌, ಸ್ಕೌಟ್ಸ್‌ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂಘಟನಾ ಚತುರತೆ, ನಾಯಕತ್ವ ಗುಣ, ವಾಕ್ಚಾತುರ್ಯ, ಶಿಸ್ತು, ನೈತಿಕತೆ, ಧೈರ್ಯ ವೃದ್ಧಿಸುತ್ತದೆ. ಸತತ ಪರಿಶ್ರಮ, ಸಾಮರ್ಥ್ಯ ಮತ್ತು ಛಲದಿಂದ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು.

ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡಿದರೆ ಸಾಲದು. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಹಾಗೂ ಸಮಾಜದಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸುವ ಗುರುತರ ಜವಾಬ್ದಾರಿ ಅವರ ಮೇಲಿದೆ ಎಂದರು.

ನಟ ಹಾಗೂ ಮಿಮಿಕ್ರಿ ಕಲಾವಿದ ಗೋಪಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಹಿರಿಯ ಮಾತು ಕೇಳಬೇಕು ಮತ್ತು ಹಿರಿಯರನ್ನು ಗೌರವಿಸಬೇಕು. ವಿವೇಕ, ಯೋಗ್ಯತೆ ಬೆಳೆಸಿಕೊಂಡರೆ ಜೀವನ ಚೆನ್ನಾಗಿರುತ್ತದೆ ಎಂದರು.

ಅಂತಾರಾಷ್ಟ್ರೀಯ ಅಥ್ಲೆಟಿಕ್‌ಕ್ರೀಡಾಪಟು ಎಂ.ಆರ್‌. ಧನುಷ್‌, ಆಸಕ್ತಿಯಿಂದ ಕ್ರೀಡೆಯಲ್ಲಿ ಮುಂದೆ ಬರಬೇಕಾದರೆ ಪ್ರತಿದಿನ ಒಂದು ಗಂಟೆಯಾದರೂ ಅಭ್ಯಾಸ ಮಾಡಬೇಕು. ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗೆ ಪರಿಹಾರ ಇರುವುದು ನಿತ್ಯದ ವ್ಯಾಯಾಮ, ದೈಹಿಕ ಶ್ರಮ, ಕ್ರೀಡಾಭ್ಯಾಸದಲ್ಲಿ ಎಂದು ಅವರು ಹೇಳಿದರು.

ವಿದ್ಯಾರ್ಥಿನಿ ಯಾಮಿನಿ ಪ್ರಾರ್ಥಿಸಿದರು. ಪ್ರಾಂಶುಪಾಲ ಎಸ್‌. ನಂಜುಂಡಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಟಿ. ಗುರುಪಾದಸ್ವಾಮಿ ನಿರೂಪಿಸಿದರು. ಎಚ್‌.ಆರ್‌. ಗಾಯತ್ರಿ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...