ಕನ್ನಡಪ್ರಭ ವಾರ್ತೆ ಹಾವೇರಿ
ಜೀವ ಅತ್ಯಂತ ಅಮೂಲ್ಯವಾದದ್ದು, ವಾಹನ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ ಹೇಳಿದರು.ನಗರದ ಎಂ.ಆರ್.ಎಂ. ಪಿಯು ಕಾಲೇಜಿನಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಹನದ ವಿಮೆ, ಅರ್ಹತಾ ಪತ್ರ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ಕಾಲೋಚಿತಗೊಳಿಸಬೇಕು. ವಾಹನ ಚಾಲನಾ ಪತ್ರವಿಲ್ಲದೆ ವಾಹನ ಚಲಾಯಿಸಬಾರದು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಚಾರಿ ಪೊಲೀಸ್ ನಿರೀಕ್ಷಕ ಎನ್.ಆರ್. ಕಾಟೆ ಮಾತನಾಡಿ, ಮೊಬೈಲ್‌ಗಳಿಗೆ ರಕ್ಷಾಕವಚ ಅಳವಡಿಸಲು ಆದ್ಯತೆ ನೀಡುವಂತೆ, ದ್ವಿಚಕ್ರ ವಾಹನ ಚಲಾಯಿಸುವಾಗ ತಮ್ಮ ತಲೆಗೆ ಹೆಲ್ಮೆಟ್ ಧರಿಸಲು ಪ್ರಾಮುಖ್ಯತೆ ನೀಡಬೇಕು. ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಸಂಭವಿಸುತ್ತವೆ. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸಂಚಾರ ನಿಯಮ ಪಾಲಿಸಬೇಕು ಹಾಗೂ ವಾಹನಗಳ ಕಾಗದಪತ್ರಗಳನ್ನು ಕಾಲಕಾಲಕ್ಕೆ ರಿನಿವಲ್ ಮಾಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಆರ್.ಎಂ. ಸಂಸ್ಥೆಯ ಚೇರಮನ್ ಡಾ. ರಾಮ ಮೋಹನ ರಾವ್ ಮಾತನಾಡಿ, ರಸ್ತೆ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಬೇಕು. ಸುರಕ್ಷತೆ ಎಂಬುದು ಬರಿ ಘೋಷಣೆಯಾಗದೇ ಅದು ಜೀವನದ ವಿಧಾನವಾಗಬೇಕು. ಎಲ್ಲರೂ ಸಂಚಾರಿ ನಿಯಮ ಪಾಲಿಸಿದಲ್ಲಿ ಅಪಘಾತಗಳನ್ನು ಖಂಡಿತವಾಗಿಯೂ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಶ್ರಮಿಸುತ್ತಿವೆ. ಸಾರ್ವಜನಿಕರೂ ಸಹ ರಸ್ತೆ ಸುರಕ್ಷತೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರಭುಸ್ವಾಮಿ ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನಗಳ ಹಿನ್ನೋಟ ಕನ್ನಡಿಗಳು ಚಾಲಕನ ಮೂರನೇ ಕಣ್ಣು ಇದ್ದ ಹಾಗೆ ಆದ್ದರಿಂದ ಅವಶ್ಯವಾಗಿ ಅಳವಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಎಂ.ಎಸ್. ಮೆಡ್ಲೇರಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ಶ್ರವಣ ಕುಲಕರ್ಣಿ ಸ್ವಾಗತಿಸಿದರು, ಶ್ರೀಪಾದ ಬ್ಯಾಳಿಯವರ ಕಾರ್ಯಕ್ರಮ ನಿರೂಪಿಸಿದರು. ಸೀಮಾ ಶಿಗ್ಗಾಂವಿ ವಂದಿಸಿದರು.