ಸಾಧನೆ, ಯಶಸ್ಸಿಗೆ ನಿರಂತರ ಕಲಿಕೆಯೊಂದೇ ಪ್ರಬಲ ಅಸ್ತ್ರ: ಪ್ರೊ. ಸಯ್ಯದ್‌ ಅಖಿಲ್‌ ಅಹಮದ್‌

KannadaprabhaNewsNetwork | Published : Jan 19, 2024 1:47 AM

ಸಾರಾಂಶ

ಸಾಧನೆ ಮತ್ತು ಯಶಸ್ಸಿಗೆ ಬೇಕು ನಿರಂತರ ಕಲಿಕೆ ಅಗತ್ಯ. ನಿಮ್ಮ ಊರಿನ ಹತ್ತಿರದ ಗ್ರಂಥಾಲಯಗಳಿಗೆ ಭೇಟಿ ಕೊಟ್ಟು ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಥಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಇಂದಿನ ಯುವಜನರು ರೀಲ್ಸ್‌ ಗಳನ್ನು ಕೆಲವೇ ಕೆಲವು ಸೆಕೆಂಡೆ ನೋಡಿ ಮುಂದಿನ ರೀಲ್ಸ್‌ ಗೆ ಜಂಪ್‌ ಆಗುತ್ತಿದ್ದಾರೆ. ಈ ಕಾರಣದಿಂದ ಅವರಲ್ಲಿ ಸುದೀರ್ಘವಾಗಿ ಓದುವ ಹವ್ಯಾಸ ಕಡಿಮೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಧನೆ ಮತ್ತು ಯಶಸ್ಸಿಗೆ ಬೇಕು ನಿರಂತರ ಕಲಿಕೆ ಅಗತ್ಯ. ಶರವೇಗದಲ್ಲಿ ಓಡುತ್ತಿರುವ ಜಗತ್ತಿನೊಂದಿಗೆ ಸ್ಪರ್ಧೆ ಮಾಡಲು ನಿರಂತರ ಕಲಿಕೆಯೊಂದೆ ಪ್ರಬಲ ಅಸ್ತ್ರವಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಸಯ್ಯದ್‌ ಅಖಿಲ್‌ ಅಹಮದ್‌ ತಿಳಿಸಿದರು.

ನಗರದ ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯು ಆಯೋಜಿಸಿದ್ದ ಪಿಡಿಒ, ಎಫ್.ಡಿ.ಎ. ಮತ್ತು ಎಸ್.ಡಿ.ಎ.ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆ ನಿಂತ ಕ್ಷಣ ಸಾಧನೆ ಮತ್ತು ಯಶಸ್ಸು ಅಂತ್ಯವಾಗುತ್ತದೆ. ಈ ಹೊತ್ತಿನಲ್ಲಿ ಜಾಗತೀಕರಣದಿಂದ ಜ್ಞಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಜೊತೆಗೆ ಶೀಘ್ರ ಮತ್ತು ಕ್ಷಣ ಕ್ಷಣದ ಬದಲಾವಣೆ ಈ ಹೊತ್ತಿನ ಜಗದ ನಿಯಮವಾಗಿದೆ ಎಂದರು.

ಮನಸ್ಸಿಟ್ಟು ಮಾಡುವ ಕೆಲಸ ಅಳಿಲು ಸೇವೆಯೇ ಆದರೂ ಭವಿಷ್ಯದಲ್ಲಿ ಅದು ಮಹತ್ತರ ಪಾತ್ರವನ್ನು ಮತ್ತು ಬದುಕಿಗೆ ತಿರುವನ್ನು ನೀಡುತ್ತದೆ. ನಿರಂತರ ಪ್ರಾಮಾಣಿಕ ಪರಿಶ್ರಮದಿಂದ ಅಸಾಧ್ಯವನ್ನು ಸಾಧ್ಯವಾಗಿಸುವ ಶಕ್ತಿ ಎಲ್ಲರಿಗೂ ಇದೆ. ನಿರಂತರ ಕಲಿಕೆಯಿಂದ ಪ್ರತಿಭಾವಂತರನ್ನೇ ಹಿಂದಕ್ಕೆ ಹಾಕಬಹುದು ಎಂದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಂಯೋಜಕಿ ಮತ್ತು ಕಾರ್ಮಿಕ ಇಲಾಖೆಯ ಉಪ ಆಯುಕ್ತೆ ಶ್ರೀವಳ್ಳಿ ಮಾತನಾಡಿ, ಒಂದು ಕಾಲದಲ್ಲಿ ಕಲಾ ವಿಭಾಗದಿಂದ ಬಂದವರು ಅಧಿಕಾರಿಗಳಾಗುತ್ತಿದ್ದರು. ಆದರೆ ಇಂದು ಎಂಜಿನಿಯರ್‌ ಮತ್ತು ಡಾಕ್ಟರ್ಸ್‌ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಅಧಿಕಾರಿಗಳಾಗಿ ಬರುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ದಿನಪತ್ರಿಕೆಗಳ ಸಂಪಾದಕೀಯವನ್ನು ತಪ್ಪದೆ ಓದಿ ಮನನ ಮಾಡಿಕೊಳ್ಳುವ ಅಭ್ಯಾಸವನ್ನು ದಿನನಿತ್ಯ ಮಾಡಬೇಕು ಎಂದು ಸಲಹೆ ನೀಡಿದರು.

ನಿಮ್ಮ ಊರಿನ ಹತ್ತಿರದ ಗ್ರಂಥಾಲಯಗಳಿಗೆ ಭೇಟಿ ಕೊಟ್ಟು ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಥಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಇಂದಿನ ಯುವಜನರು ರೀಲ್ಸ್‌ ಗಳನ್ನು ಕೆಲವೇ ಕೆಲವು ಸೆಕೆಂಡೆ ನೋಡಿ ಮುಂದಿನ ರೀಲ್ಸ್‌ ಗೆ ಜಂಪ್‌ ಆಗುತ್ತಿದ್ದಾರೆ. ಈ ಕಾರಣದಿಂದ ಅವರಲ್ಲಿ ಸುದೀರ್ಘವಾಗಿ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೈಸೂರು ಮಹಾನಗರಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡರೆ ಯಶಸ್ಸಿನ ಹಾದಿಯಲ್ಲಿ ಸುಗಮವಾಗಿ ಸಾಗಬಹುದು. ಯಶಸ್ಸಿನ ಹಾದಿಯ ಪಯಣಕ್ಕೆ ಕಠಿಣ ಪರಿಶ್ರಮವೊಂದೇ ಪರಿಹಾರ ಎಂದು ಕಿವಿಮಾತು ಹೇಳಿದರು.

ಅಖಿಲ ಭಾರತ ಸಹಕಾರ ಮಾರುಕಟ್ಟೆ ನಿರ್ದೇಶಕ ವೈ.ಎನ್. ‌ಶಂಕರೇಗೌಡ, ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್. ಬಾಲಕೃಷ್ಣ, ಡಾ.ಕೃ.ಪ. ಗಣೇಶ, ಡಾ.ಎಸ್.ಬಿ.ಎಂ. ‌ಪ್ರಸನ್ನ, ಡಾ. ನಾಗಾಚಾರ್‌, ಡಾ. ಉಮೇಶ್‌ ಬೇವಿನಹಳ್ಳಿ, ಎಸ್. ‌ಗಣೇಶ್‌, ಕಿರಣ್‌ ಕೌಶಿಕ್‌, ಕೆ.ವೈ. ನಾಗೇಂದ್ರ ಇದ್ದರು.

Share this article