ಮಹಾತ್ಮರ ಬದುಕು ತಿಳಿದು ನಡೆದರೆ ಜೀವನ ಪಾವನ: ಗುರುಬಸವ ಮಹಾಂತ ದೇಶಿಕೇಂದ್ರ ಶ್ರೀ

KannadaprabhaNewsNetwork |  
Published : Mar 08, 2024, 01:51 AM IST
6ಎಚ್‌ವಿಆರ್‌2 | Kannada Prabha

ಸಾರಾಂಶ

ಪ್ರವಚನಗಳ ಮೂಲಕ ಮಹಾತ್ಮರ ಬದುಕು ತಿಳಿದು ನಡೆದರೆ ಜೀವನ ಪಾವನವಾಗುತ್ತದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಇಂದಿನ ದಿನಗಳಲ್ಲಿ ಮನುಷ್ಯನ ಬಳಿ ಏನೆಲ್ಲ ಇದ್ದರೂ ಸಂತೃಪ್ತಿ ಇಲ್ಲದಂತಾಗಿದೆ. ಆದ್ದರಿಂದ ಪ್ರವಚನಗಳ ಮೂಲಕ ಮಹಾತ್ಮರ ಬದುಕು ತಿಳಿದು ನಡೆದರೆ ಜೀವನ ಪಾವನವಾಗುತ್ತದೆ ಎಂದು ಕ್ಯಾಸನೂರಿನ ಹಿರೇಮಠ ಹಾಗೂ ತೊಗರ್ಸಿಯ ಮಳೇಮಠದ ಗುರುಬಸವ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿಯ ಸಿಂದಗಿ ಮಠದಲ್ಲಿ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವದ ಎರಡನೇ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾತ್ಮರ ಸ್ಮರಣೆ ಎಂದರೆ ಕೇವಲ ಅವರನ್ನು ನೆನಪಿಸಿಕೊಳ್ಳುವುದಲ್ಲ. ಅವರ ಆದರ್ಶ ಮಾರ್ಗದಲ್ಲಿ ನಡೆದು, ಅವರಂತೆ ಸಮಾಜಮುಖಿ ಕಾರ್ಯವನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ಮರಣೆ ಸಾರ್ಥಕವಾಗುತ್ತದೆ. ಮಹಾ ಶಿವರಾತ್ರಿಯ ಈ ಸಮಯದಲ್ಲಿ ಮಹಾತ್ಮರ ಜೀವನ ಸಾಧನೆಯನ್ನು ಶ್ರವಣ ಮಾಡಿದರೆ ಇಡೀ ವರ್ಷ ನಮ್ಮ ಬದುಕು ನೆಮ್ಮದಿಯಾಗಿರುತ್ತದೆ. ಸಮಾಜಕ್ಕೆ ಏನನ್ನು ಕೊಡದಿದ್ದರೂ ಪರವಾಗಿಲ್ಲ. ತಮ್ಮ ತಂದೆ-ತಾಯಿಗಳನ್ನು ಅಗೌರವದಿಂದ ನೋಡಿಕೊಳ್ಳದಿದ್ದರೆ ಸಾಕು ಎನ್ನುವ ದುಃಸ್ಥಿತಿಗೆ ಇಂದು ಸಮಾಜ ಬಂದಿದೆ. ತಂದೆ-ತಾಯಿಗಳನ್ನು, ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಶಿಕ್ಷಣ ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡಬೇಕು ಎಂದರು.

ಇದಕ್ಕೂ ಮುನ್ನ ಹುಬ್ಬಳ್ಳಿಯ ಖ್ಯಾತ ಹಿಂದುಸ್ತಾನಿ ಗಾಯಕಿ ರೇಖಾ ಹೆಗಡೆ ಇವರಿಂದ ಸಂಗೀತ ಸೇವೆ ಜರುಗಿತು. ಕಾಮನಹಳ್ಳಿಯ ಹನುಮಂತಪ್ಪ ಗವಾಯಿಗಳ ವಾಯಿಲಿನ್ ವಾದನ, ಕಟ್ಟಿಸಂಗಾವಿಯ ವೀರಭದ್ರಯ್ಯರ ಹಾರ್ಮೋನಿಯಂ ಹಾಗೂ ನಾಗೇಶಕುಮಾರರ ತಬಲಾ ಸಾಥ್‌ ಸಂಗೀತ ಕಾರ್ಯಕ್ರಮಕ್ಕೆ ಸಂಭ್ರಮ ತಂದುಕೊಟ್ಟಿತು.

ತಾರಿಹಾಳ ಅಡವಿ ಸಿದ್ದೇಶ್ವರ ಮಠದ ಅಡವೀಶ್ವರ ದೇವರು ಮಹಾತ್ಮರ ಜೀವನ ದರ್ಶನ ಕುರಿತು ಪ್ರವಚನ ನೀಡಿದರು.

ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಂದಗಿಮಠದ ಸಂಸ್ಕೃತ ಉಪನ್ಯಾಸಕ ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ