ಗುರು ಬಲದಿಂದ ಬಾಳು ಸುಭದ್ರ: ರಂಭಾಪುರಿಶ್ರೀ

KannadaprabhaNewsNetwork |  
Published : May 12, 2026, 02:30 AM IST
ರಾಣಿಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ಪಂಚ ಪೀಠಗಳ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. . . . . . . . .ರಾಣಿಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣದ ಅಂಗವಾಗಿ ಪಂಚ ಪೀಠಗಳ ಜಗದ್ಗುರುಗಳು ದೇವರಿಗೆ ಪೂಜೆ ನೆರವೇರಿಸಿದರು.  | Kannada Prabha

ಸಾರಾಂಶ

ಶಿವನ ಸಾಕಾರ ರೂಪ ಶ್ರೀ ಗುರುವಾಗಿದ್ದು, ಆತನ ದರ್ಶನವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವುದು ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ನುಡಿದರು.

ರಾಣಿಬೆನ್ನೂರು: ಶಿವನ ಸಾಕಾರ ರೂಪ ಶ್ರೀ ಗುರುವಾಗಿದ್ದು, ಆತನ ದರ್ಶನವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವುದು ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ನುಡಿದರು. ಸೋಮವಾರ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬ್ರಹ್ಮ ಸೃಷ್ಟಿ ಮಾಡಬಲ್ಲ. ವಿಷ್ಣು ಸಂರಕ್ಷಣೆ ಮಾಡಬಲ್ಲ. ಮಹೇಶ್ವರ ದುಷ್ಟ ಶಕ್ತಿ ನಾಶ ಮಾಡಬಲ್ಲ. ಈ ಮೂರು ಗುಣಗಳು ಶ್ರೀ ಗುರುವಿನಲ್ಲಿ ಅಡಕವಾಗಿವೆ. ಶ್ರೀ ಗುರು ಮನಸ್ಸು ಮಾಡಿದರೆ ಹೊಸದನ್ನು ನಿರ್ಮಿಸಬಲ್ಲ ಮತ್ತು ಸಂರಕ್ಷಿಸಬಲ್ಲ. ಗುರುವಿನ ಕೋಪ ತಾಪಕ್ಕೆ ಬಲಿಯಾದರೆ ನಾಶ ನಿಶ್ಚಿತ. ಗುರು ಕಾರುಣ್ಯ ಸಂಪ್ರಾಪ್ತಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಗುರು ನರನೆಂದವಗೆ, ಲಿಂಗ ಶಿಲೆ ಎಂದವನಿಗೆ, ಕರುಣ ಪ್ರಸಾದ ಎಂಜಲು ಎನ್ನುವವರಿಗೆ ನಾಯಕ ನರಕ ತಪ್ಪದೆಂದು ಸರ್ವಜ್ಞ ಕವಿ ಎಲ್ಲರನ್ನು ಎಚ್ಚರಿಸಿದ್ದಾನೆ. ಅರೇಮಲ್ಲಾಪುರ ಗ್ರಾಮ ಚಿಕ್ಕದಾದರೂ ಇಲ್ಲಿರುವ ಜನರ ಭಕ್ತಿ ಶ್ರದ್ಧೆ ಅಪಾರ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರ ಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ಅರೇಮಲ್ಲಾಪುರ ಗ್ರಾಮದಲ್ಲಿ ನೆಲೆಗೊಂಡಿರುವು ತಮ್ಮೆಲ್ಲರ ಸೌಭಾಗ್ಯ ಎಂದರು. ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗಶ್ರೀಗಳು ಮಾತನಾಡಿ, ದೇಶ ಕಾಯುವ ಯೋಧ ಅನ್ನ ನೀಡುವ ರೈತ ಇವರನ್ನು ಯಾರೂ ಮರೆಯಬಾರದು ಎಂದರು.ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯರು ಮಾತನಾಡಿ, ಸೂರ್ಯ ಸಿರಿವಂತರ ಮತ್ತು ಬಡವರ ಮನೆ ಮೇಲೆ ಸಮಾನವಾದ ಬೆಳಕು ಬೀರುವ ರೀತಿಯಲ್ಲಿ ಶ್ರೀ ಗುರುವು ಸರ್ವ ಜಾತಿ ಜನಾಂಗದವರನ್ನು ಸಮಾನ ಮನೋಭಾವನೆಯಿಂದ ಕಂಡು ಆಧ್ಯಾತ್ಮದ ಅರಿವು ಉಂಟು ಮಾಡುತ್ತಾನೆ. ಜಾತಿಗಿಂತ ನೀತಿ ಶ್ರೇಷ್ಠವೆಂದು ಭಾವಿಸಿ ಬಾಳಿದರೆ ಬದುಕಿನಲ್ಲಿ ಉನ್ನತಿ ಸುಲಭ ಸಾಧ್ಯವಾಗುವುದು ಎಂದರು. ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರಶ್ರೀಗಳು ಮಾತನಾಡಿ, ವೀರಶೈವ ಧರ್ಮ ವಿಶಾಲವಾದ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿದೆ. ಜಾತಿಗಿಂತ ನೀತಿ ದೊಡ್ಡದೆಂದು ಗೌರವಿಸಿದ್ದಾರೆ. ವೀರಶೈವ ಧರ್ಮದ ಮೂಲ ಪೀಠಾಚಾರ್ಯರು ಪಂಚ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣ ಈ ಸೂತ್ರಗಳು ವೀರಶೈವ ಧರ್ಮ ಬಾಂಧವರಿಗೆ ಅನ್ವಯಿಸುತ್ತವೆ. ಪ್ರಪಂಚ ಮತ್ತು ಪಾರಮಾರ್ಥಿಕ ಅರಿತು ಬಾಳುವುದೇ ವೀರಶೈವ ಧರ್ಮದ ಗುರಿಯಾಗಿದೆ. ಜೀವನ ವಿಕಾಸಕ್ಕೆ ಪಂಚಸೂತ್ರಗಳ ಅರಿವು ಎಲ್ಲರಲ್ಲಿ ಜಾಗೃತಗೊಳ್ಳಬೇಕಾಗಿದೆ ಎಂದರು. ಕಾಶಿ ಪೀಠದ ನೂತನ ಜಗದ್ಗರು ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನರು ಮಾತನಾಡಿ, ಮಾನವ ಜೀವನ ಮೌಲ್ಯಗಳು ಯಾವಾಗಲೂ ಶಾಶ್ವತ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಜೀವನ ಮೌಲ್ಯಗಳು ಕುಸಿಯುತ್ತಿವೆ. ಭೌತಿಕ ಸಂಪನ್ಮೂಲಕ್ಕಿಂತ ಆಧ್ಯಾತ್ಮ ಆದರ್ಶಗಳ ಪರಿಪಾಲನೆ ಅಗತ್ಯವಾಗಿದೆ ಎಂದರು. ಸಮಾರಂಭ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ನಡೆದದ್ದು ಇಲ್ಲಿಯ ಜನರ ಸೌಭಾಗ್ಯ. ಪೂಜ್ಯರ ಆಶೀರ್ವಾದದಿಂದ ಈ ಭಾಗದ ಜನರ ಬದುಕು ಬಲಗೊಳ್ಳಲಿ ಎಂದರು. ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಚ್.ಎಸ್. ಶಿವಶಂಕರ್, ವಿರೂಪಾಕ್ಷಪ್ಪ ಬಳ್ಳಾರಿ, ಹಿರಿಯ ನ್ಯಾಯವಾದಿ ಪಿ.ಆರ್. ಕುಪ್ಪೇಲೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಹೊನ್ನಾಳಿ ಹಿರೇಕಲ್ಮಠ, ಹಾವೇರಿ ಕರ್ಜಗಿಮಠ, ಅಕ್ಕಿಆಲೂರು ಹಿರೇಮಠ, ದಿಂಡದಹಳ್ಳಿ ಹಿರೇಮಠ, ಲಿಂಗದಹಳ್ಳಿ ಹಿರೇಮಠ, ಹಾವೇರಿ ಬಣ್ಣದಮಠ, ರಾಣಿಬೆನ್ನೂರು ಹಿರೇಮಠ, ಮಳಲಿ ಸಂಸ್ಥಾನಮಠ, ಮಣಕೂರು, ನಾಗವಂದ, ಹಿರೇಮಣಕಟ್ಟಿ, ಗಂಜಿಗಟ್ಟಿ, ಕೂಡಲ, ಹರಪನಹಳ್ಳಿ, ರಾಂಪುರ ಬೃಹನ್ಮಠದ ಶ್ರೀಗಳವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲ್ಮೇಶ್ವರ ದೇವರ ಮರು ಪ್ರಾಣ ಪ್ರತಿಷ್ಠಾಪನೆ, ಕರಗಲ್ಲು ಸ್ಥಾಪನೆ, ಸಾಮೂಹಿಕ ವಿವಾಹ ಸಮಾರಂಭ ಸಂಭ್ರಮದಿಂದ ಜರುಗಿತು. ಇದಕ್ಕೂ ಪೂರ್ವ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ, ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಇದರಲ್ಲಿ ಪಾಲ್ಗೊಂಡು ಪುನೀತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ. ಸುಧಾಕರ್‌ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಹಾನಿಯಾಗಿದೆ-ಸಚಿವ ಸತೀಶ ಜಾರಕಿಹೊಳಿ
ಕುಡಿಯವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಒದಗಿಸಿ; ಸಂಸದ ಕಾಗೇರಿ