ಮನಸ್ಸನ್ನು ದೇವರಿಗೆ ಅರ್ಪಿಸಿ ಮುನ್ನಡೆದರೆ ಜೀವನ ಸಾರ್ಥಕ

KannadaprabhaNewsNetwork |  
Published : Oct 08, 2024, 01:05 AM IST
ಅಬ್ಬಿಗೇರಿಯಲ್ಲಿ ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 5 ನೇ ದಿನದ ಸಮಾರಂಭದಲ್ಲಿ ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಸುಖ ದುಃಖಗಳ ಸಂಮಿಶ್ರಣವೇ ಜೀವನ. ಸುಖವಿರಲಿ ಕಷ್ಟವಿರಲಿ ಬದುಕಿ ಬಾಳುವ ಆದರ್ಶ ಗುಣ ಸಂಪಾದಿಸಬೇಕು

ಗದಗ: ದೇಹವನ್ನು ದುಡಿಮೆಗೆ, ಮನಸ್ಸನ್ನು ದೇವರಿಗೆ ಅರ್ಪಿಸಿ ಮುನ್ನಡೆದರೆ ಜೀವನ ಸಾರ್ಥಕಗೊಳ್ಳುವುದು, ಇದನ್ನು ಯುವ ಸಮುದಾಯದ ಅಳವಡಿಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ರಾತ್ರಿ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಐದನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬೆಳೆದು ನಿಂತ ಮರ, ಹರಿಯುವ ನೀರು, ಬೀಸುವ ಗಾಳಿ ನಿಂತ ನೆಲ ತ್ಯಾಗದ ಹಿರಿಮೆ ಮತ್ತು ಪರೋಪಕಾರ ಎತ್ತಿ ತೋರಿಸುತ್ತದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಸಮಯವಿಲ್ಲ ಎನ್ನುವ ಜನರಿದ್ದಾರೆ.

ಸುಖ ದುಃಖಗಳ ಸಂಮಿಶ್ರಣವೇ ಜೀವನ. ಸುಖವಿರಲಿ ಕಷ್ಟವಿರಲಿ ಬದುಕಿ ಬಾಳುವ ಆದರ್ಶ ಗುಣ ಸಂಪಾದಿಸಬೇಕು. ರೈತ ದೇಶದ ಬೆನ್ನೆಲುಬು. ರೈತ ಒಕ್ಕಿದರೆ ಲೋಕವೆಲ್ಲ ಉಕ್ಕುವುದು ಇಲ್ಲದೇ ಇದ್ದರೆ ಲೋಕ ಬಿಕ್ಕುವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾನೆ. ಕಾಯಕದಿಂದಲೇ ಚೈತನ್ಯ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುತ್ತದೆ ಎಂದರು.

ನಾಡಿಗೆ ಅನ್ನ ನೀಡುವ ರೈತನ ಬಾಳು ಉಜ್ವಲವಾಗಬೇಕು. ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಸಂಪತ್ತು ಇಲ್ಲದೇ ಇದ್ದರೆ ಬದುಕಬಹುದು. ಆದರೆ ಮಣ್ಣು ಇಲ್ಲದೇ ಅನ್ನವಿಲ್ಲದೇ ಬದುಕಲಾಗದು. ದೇಶದ ಬೆಳವಣಿಗೆಗೆ ಕೃಷಿ ಅವಶ್ಯಕತೆ ಬಹಳಷ್ಟಿದೆ. ಮಣ್ಣು ನೀರು ಬೆಂಕಿ ಗಾಳಿ, ಕಲ್ಲಿನಲ್ಲಿಯೂ ದೇವರನ್ನು ಕಂಡು ಪೂಜಿಸುವ ಮನೋಭಾವ ಕಾಣುತ್ತೇವೆ. ನವರಾತ್ರಿಯ 5 ನೇ ದಿನ ಸ್ಕಂದ ಮಾತೆ ಹೆಸರಿನಲ್ಲಿ ದೇವಿ ಪೂಜಿಸುತ್ತಾರೆ. ಸ್ಕಂದ ಮಾತಾ ಪೂಜೆಯಿಂದ ಮುಕ್ತಿ ಶಕ್ತಿ ಪ್ರಾಪ್ತವಾಗುವುದು ಎಂದರು.

ಹಂಪಸಾಗರ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ, ಭವ ಬಂಧನದಿಂದ ಮುಕ್ತಿಗೊಳಿಸುವ ಶಕ್ತಿ ಶ್ರೀಗುರುವಿಗೆ ಇದೆ. ಎಲ್ಲ ಧರ್ಮಗಳಲ್ಲಿಯೂ ಸಹ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಅರಿವು ಆಚರಣೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಬಸವಕಲ್ಯಾಣ ನಗರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ದರ್ಬಾರ ಸಮಾರಂಭ ನಡೆಸಿಕೊಡಬೇಕೆಂದು ಮನವಿ ಮಾಡಿದರು.

ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ ಕೃತಿಯನ್ನು ಸಂಸದ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ ಮಾತನಾಡಿ, ಜೀವನದ ಶ್ರೇಯಸ್ಸಿಗೆ ನೀತಿ ಸಂಹಿತೆ ಮುಖ್ಯ, ಕ್ರಮಬದ್ಧವಾದ ಜೀವನ ಬದುಕಿನ ಉತ್ಕರ್ಷತೆಗೆ ಕಾರಣವಾಗುತ್ತದೆ. ಮನುಷ್ಯ ಜೀವನದಲ್ಲಿ ಬಾಲ್ಯ ಬದುಕಿನ ಸಂಜೀವಿನಿಗೆ ಕಾರಣವಾಗುತ್ತದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಚಂದ್ರು ಲಮಾಣಿ, ವಿಪ ಸದಸ್ಯ ಎಸ್.ವಿ.ಸಂಕನೂರ, ರೋಣ ಪುರಸಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ನರೇಗಲ್ಲ ಪಪಂ ಅಧ್ಯಕ್ಷ ಫಕ್ಕೀರಪ್ಪ ಮಳ್ಳಿ, ರೋಣ ಶಾಸಕ ಜಿ.ಎಸ್. ಪಾಟೀಲ ಉಪಸ್ಥಿತರಿದ್ದರು.

ಕೃಷಿ ತಜ್ಞ ಆನಂದ ಆಶೀಷರ್ ಮಾತನಾಡಿ, ಸಾವಯವ ಕೃಷಿಯಿಂದ ಭೂಮಿಯ ತಾಕತ್ತು ಹೆಚ್ಚುತ್ತದೆ. ಉತ್ತಮವಾದ ಫಸಲು ದೊರಕುತ್ತದೆ. ಸಾವಯವ ಕೃಷಿಯಿಂದ ಬೆಳೆದ ಪದಾರ್ಥ ಬಳಸುವುದರಿಂದ ಆರೋಗ್ಯ ಸಂಪತ್ತು ಹೆಚ್ಚುವುದು. ಸಾವಯವ ಹಸಿರು ದೇಶಕ್ಕೆ ಉಸಿರು ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದರು.

ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿದರು. ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ತುಪ್ಪದಕುರಹಟ್ಟಿ ಡಾ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಕೊಡಗಾನೂರು ಚಂದ್ರಶೇಖರ ಸ್ವಾಮಿಗಳು, ಲಕ್ಷ್ಮೇಶ್ವರದ ಸಿದ್ಧರಾಮಯ್ಯ ಘಂಟಾಮಠ, ದೇವಪ್ಪ ಮಾದರ, ಬಿ.ಎಂ. ಸಜ್ಜನ್, ಡಾ.ಬಿ.ವೈ.ಕಂಬಳಿಹಾಳ, ಡಾ. ಬಸವರಾಜ ದಿಂಡೂರ, ಗದಗಿನ ಕಿರಣ ಭೂಮಾ, ಸದಾಶಿವಯ್ಯ ಮದರಿಮಠ, ಈಶಣ್ಣ ಜಾಲಿಹಾಳ ಅಬ್ಬಿಗೇರಿ, ಗದಗಿನ ಶರಣಬಸಪ್ಪ ಗುಡಿಮನಿ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಬೈಲಹೊಂಗಲ ತಾಲೂಕು ದೊಡ್ಡವಾಡದ ಚನಬಸಯ್ಯ (ಅಜ್ಜಯ್ಯ) ಪೂಜಾರ ಹೆಳವನ ಪಾತ್ರದಲ್ಲಿ ಆಗಮಿಸಿ ಶ್ರೀರಂಭಾಪುರಿ ಜಗದ್ಗುರುಗಳವರ ಇತಿಹಾಸ ಮತ್ತು ಪೀಠ ಪರಂಪರೆ ಕುರಿತು ವಿವರಿಸಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ಅಬ್ಬಿಗೇರಿ ಹಿರೇಮಠದ ಮಹಿಳಾ ಮಂಡಳಿಯವರಿಂದ ವೇದಘೋಷ, ವೀರೇಶ ಕಿತ್ತೂರ ಮತ್ತು ಡಾ. ಪಂಚಾಕ್ಷರಿ ಬಾಲಚಂದ್ರ ಶಾಸ್ತ್ರಿಗಳು ಹಿರೇಮಠ, ಚಿಕ್ಕಮಣ್ಣೂರು-ಬೆಂಗಳೂರು ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

ಬಸವಕಲ್ಯಾಣದಲ್ಲಿ 2025 ರ ದಸರಾ ಮಹೋತ್ಸವ: ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರುಗಳವರ 34 ನೇ ವರ್ಷದ ದಸರಾ ಧರ್ಮ ಸಮ್ಮೇಳನ ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ನಡೆಸುವುದಾಗಿ ಶ್ರೀರಂಭಾಪುರಿ ಜಗದ್ಗುರುಗಳು ಪ್ರಕಟಸಿದರು. ಇದಕ್ಕೆ ಅಲ್ಲಿ ನರೆದಿದ್ದ ಭಕ್ತರು, ಬೀದರ ಜಿಲ್ಲೆಯ ಭಕ್ತರು ಚೆಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ