ಮಲ್ಲಮ್ಮಳ ತತ್ವಾದರ್ಶದಿಂದ ಬದುಕು ಸಾರ್ಥಕ

KannadaprabhaNewsNetwork | Published : May 18, 2025 11:54 PM
Follow Us

ಸಾರಾಂಶ

ಕಾಯಕ,ಕೃಷಿ ಮಾಡುತ್ತಾ ಸಹೋದರ ಸಮಾಜದೊಂದಿಗೆ ಅನೋನ್ಯತೆಯಿಂದ ಬೆರೆತು ಜೀವನ ನಡೆಸುವ ಸ್ಥಿತಿ ಮಾದರಿಯಾಗಿದೆ

ಕೊಪ್ಪಳ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವಾದರ್ಶ ಸಮಾಜದ ಪ್ರತಿಯೊಬ್ಬರೂ ಪಾಲಿಸಿದರೇ ಬದುಕು ಸಾರ್ಥಕವಾಗುತ್ತದೆ ಎಂದು ಅನ್ನದಾನೇಶ್ವರ ಶಾಖಾಮಠದ ವಿಶ್ವೇಶ್ವರ ದೇವರು ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ರೆಡ್ಡಿ ಸಮಾಜದಿಂದ ಜರುಗಿದ ಮಹಾಸಾದ್ವಿ ಶಿವಶರಣೆ ಶ್ರೀಹೇಮರಡ್ಡಿ ಮಲ್ಲಮನ ಜಯಂತಿ ಹಾಗೂ ಸಮಾಜದ ನಿವೃತ್ತ ನೌಕರರಿಗೆ ಮತ್ತು ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಬದುಕಿನಲ್ಲಿ ಸುಖ, ದು:ಖ ಸಮಾನವಾಗಿ ಸ್ವೀಕರಿಸಿ ಮಹಾಸಾಧನೆ ಮಾಡಿದವಳು ಹೇಮರಡ್ಡಿ ಮಲ್ಲಮ್ಮನವರು. ಸಮಸ್ಥಿತಿಯಲ್ಲಿ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದು ತಾಳ್ಮೆಗೆ ಇನ್ನೊಂದು ಹೆಸರೇ ಮಲ್ಲಮ್ಮ ಎಂದರು.

ಕಾಯಕ,ಕೃಷಿ ಮಾಡುತ್ತಾ ಸಹೋದರ ಸಮಾಜದೊಂದಿಗೆ ಅನೋನ್ಯತೆಯಿಂದ ಬೆರೆತು ಜೀವನ ನಡೆಸುವ ಸ್ಥಿತಿ ಮಾದರಿಯಾಗಿದೆ. ಪುಣ್ಯಪುರುಷರು ಹಾಕಿಕೊಟ್ಟ ಪರಂಪರೆಯಲ್ಲಿ ರಡ್ಡಿ ಸಮಾಜ ಮುಂದುವರೆದಿದ್ದು ಶಿಕ್ಷಣ, ಜೌದ್ಯೋಗಿಕವಾಗಿ, ಇತರೆ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ವಹಿಸಿ ಉತ್ತಮ ಸಾಧನೆ ಮಾಡುತ್ತಿದೆ. ಮಲ್ಲಮ್ಮ ಕೇವಲ ರಡ್ಡಿ ಸಮಾಜಕ್ಕೆ ಸೀಮಿತವಲ್ಲ ಅವರು ಈ ದೇಶದ ಆಸ್ತಿಯಾಗಿದ್ದಾಳೆ ಎಂದರು.

ಕುಕನೂರು ತಾಲೂಕು ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಮಲ್ಲಮ್ಮನವರು ತಮ್ಮ ಕುಟುಂಬದ ಎಲ್ಲ ನೋವು ಸಹಿಸಿಕೊಂಡು ತನ್ನಲ್ಲಿರುವ ದೈವಿ ಭಕ್ತಿಯಿಂದ, ತಾಳ್ಮೆಯಿಂದ ಬಂದ ಕಷ್ಟ ಕಾರ್ಪಣ್ಯ ಎದುರಿಸಿ ಭಕ್ತಿ ಮತ್ತು ನಂಬಿಕೆಯ ಮೂಲಕ ಏನನ್ನಾದರು ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ಶ್ರದ್ಧೆ ಮತ್ತು ನಂಬಿಕೆಯಿಂದ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮಲ್ಲಮ್ಮ ಸಾಕ್ಷಿ ಎಂದು ಬಣ್ಣಿಸಿದರು.

ನಿವೃತ್ತ ಪ್ರಾಚಾರ್ಯ ಎಸ್.ಎನ್. ಶಿವರಡ್ಡಿ ಮಾತನಾಡಿ, ಎರಡು ದಶಕಗಳ ಹಿಂದೆ ಪ್ರಥಮ ಬಾರಿ ಸಂಗನಹಾಲದಲ್ಲಿ ಮಲ್ಲಮ್ಮ ಜಯಂತಿ ಆಚರಿಸಲಾಗಿದೆ.ಈಗ ಸರ್ಕಾರದಿಂದ ರಾಜ್ಯಾದ್ಯಂತ ಜಯಂತಿ ಆಚರಣೆ ಮಾಡುತ್ತಿದೆ. ಮಲ್ಲಮ್ಮ ಓರ್ವ ಜಾತಿಗೆ ಸೀಮಿತವಾಗಿಲ್ಲ ಶಿವಶರಣೆ ತತ್ವಗಳನ್ನು ಅಳವಡಿಸಿಕೊಂಡು ಮಹಾಸ್ವಾಧಿಯಾಗಿದ್ದಾಳೆ ಎಂದರು.

ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ವಿದ್ಯಾರ್ಥಿಗಳಾದ ಶಶಿಧರಗೌಡ ಮಾಲಿಪಾಟೀಲ, ಐಶ್ವರ್ಯಾ ಹಳ್ಳಿಗುಡಿ, ಶ್ರೇಯಾ ಶಿವರಡ್ಡಿ, ಸುಚಿತ್ರಾ ಅಡವಳ್ಳಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು.

ಯಲಬುರ್ಗಾ ಬ್ಲಾಕ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ, ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಸುರೇಶ ಮಾದಿನೂರು, ಸಿಎಂ ಈಶ್ವರ ಅಟಮಾಳಗಿ, ಶರಣಪ್ಪ ಮುತ್ತಾಳ, ಸಂಗಮೇಶ ಗಡಾದ, ಕುಮಾರ ಗಡಾದ, ಪುಂಡಪ್ಪ ಗಿರಡ್ಡಿ, ಅಮರೇಶ ಶಿವರಡ್ಡಿ, ಬಸವರಡ್ಡಿ ಬೀಡನಾಳ, ಅಡಿವೆಪ್ಪ ಲಕ್ಕಲಕಟ್ಟಿ, ಗವಿಸಿದ್ದಪ್ಪ ಚೋಳಿನ, ಬಸವಂತಪ್ಪ ಗಡಾದ, ಷಣ್ಮುಖಪ್ಪ ಯರಂಗಳಿ ಇತರರಿದ್ದರು.

ಅದ್ಧೂರಿ ಮೆರವಣಿಗೆ: ಸಂಗನಹಾಲ ಗ್ರಾಮದಲ್ಲಿ ಶನಿವಾರ ಶ್ರೀಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಯರೇಹಂಚಿನಾಳದ ಪತ್ರೇಶ್ವರ ಕೋಲಾಟ ತಂಡ, ಸಂಗನಹಾಲದ ಡೊಳ್ಳು ಕುಣಿತ, ಕರಡಿ ಮಜಲು, ಮಹಿಳೆಯರ ಕುಂಭ, ಕಳಸಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.