ಡಾ. ರಾಜಕುಮಾರ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗೋಕಾಕ್ ಚಳವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ
ಕೊಪ್ಪಳ: ಡಾ. ರಾಜಕುಮಾರ ನಟಿಸಿದ ಚಲನಚಿತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ಜತೆಗೆ ಉತ್ತಮ ಜೀವನ ಸಂದೇಶವಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಹಿನ್ನೆಲೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ ಸಂಭ್ರಮ 2026 ಡಾ.ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ ಮತ್ತು ಡಾ.ರಾಜ್‌ಕುಮಾರ್ ಸಿನೆಮಾ ಡೈಲಾಗ್ (ಮಿಮಿಕ್ರಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ರಾಜಕುಮಾರ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗೋಕಾಕ್ ಚಳವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಎಂದರು.
ಡಾ. ರಾಜ್‌ಕುಮಾರ್ ಹೆಚ್ಚು ಓದದಿದ್ದರೂ ಅವರು ತೋರಿದ ಸಾಧನೆ ಅನನ್ಯ. ಈಜು, ಯೋಗದಂತಹ ಹವ್ಯಾಸ ರೂಢಿಸಿಕೊಂಡಿದ್ದರು ಎಂದರು.
ಅಧಿಕಾರಿಗಳು ಮುತುವರ್ಜಿ ವಹಿಸಿದ್ದರಿಂದ ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ಗೀತಾಗಾಯನ ಕಾರ್ಯಕ್ರಮ ಸಾಧ್ಯವಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸಹಯೋಗ ನೀಡಿದೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು ಹಾಗೂ ಲೇಖಕಿ ಸಾವಿತ್ರಿ ಮುಜುಮದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್‌ಕುಮಾರ್ ಕನ್ನಡದ ಅಸ್ಮಿತೆ. ಪ್ರಭಾವಿ ನಟರಾಗಿ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದರು. ನಾಟಕ ಕಂಪನಿಗಳಿಂದ ಅಭಿನಯ ಆರಂಭಿಸಿ ಅನೇಕ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರ ಮನದಲ್ಲಿ ಅಜರಾಮರವಾಗಿದ್ದಾರೆ. ನಟನೆ, ಸಂಭಾಷಣೆ, ಸಂಗೀತ, ಸ್ವರ ಸಂಯೋಜನೆ ಅರ್ಥಗರ್ಭಿತವಾಗಿವೆ.
ರಾಜ್‌ಕುಮಾರ್ ಕೇವಲ ನಟರಾಗದೇ ಗೋಕಾಕ್ ಚಳವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ ಕನ್ನಡ ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ ಎಂದರು.
ಕನ್ನಡ ಪರ ಹೋರಾಟಗಾರ ಮಹಾಂತೇಶ ಕೊತಬಾಳ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಹಿರಿಯ ಚಲನಚಿತ್ರ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡ್ರ, ಹಿರಿಯ ಸಾಹಿತಿ ಡಾ.ಅಲ್ಲಮಪ್ರಭು ಬೆಟ್ಟದೂರು, ಕನ್ನಡ ಪರ ಹೋರಾಟಗಾರ ಮಂಜುನಾಥ ಸುತ್ತೂರು, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಸ್ವಾಗತಿಸಿದರು. ಗ್ರಂಥಾಲಯ ಇಲಾಖೆಯ ನಾಗರಾಜ ನಾಯಕ ಡೊಳ್ಳಿನ್ ನಿರೂಪಿಸಿದರು.
ಸನ್ಮಾನ:
ಗೋಕಾಕ್ ಚಳವಳಿ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಭಾಗವಹಿಸಿದ ಅನೇಕ ಮಹನಿಯರ ಪೈಕಿ ಮಂಚೂಣಿಯಲ್ಲಿದ್ದ ಕೆಲ ಹೋರಾಟಗಾರರಿಗೆ, ಕನ್ನಡಪರ ಸಂಘಟಿಕರಿಗೆ ಚಲನಚಿತ್ರ ಅಕಾಡೆಮಿಯಿಂದ ಸನ್ಮಾನಿಸಲಾಯಿತು.
ಹಾಡಿನ ಹೊಳೆ:
ಸುಮಾರು 60ಕ್ಕೂ ಹೆಚ್ಚು ಜನರು ಸತತ 4 ಗಂಟೆಗೂ ಹೆಚ್ಚಿನ ಸಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಾ. ರಾಜಕುಮಾರ ಹಾಡುಗಳ ಹೊಳೆ ಹರಿಸಿದರು. ಕೆಲವರು ಮಿಮಿಕ್ರಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.