ಹೊಳಲ್ಕೆರೆ ತಾಲೂಕು ಕಛೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತ್ಯೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬೀಬಿ ಫಾತಿಮಾ ಭಾಗವಹಿಸಿ ಶರಣರ ಜೀವನ ನಮಗೆ ಸದಾ ಅನುಕರಣೀಯವಾದುದು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ/ ಹಿರಿಯೂರು
ಕಾಯಕ ಶರಣರು ಹನ್ನೆರಡನೆಯ ಶತಮಾನದ ನಿಜ ಶರಣರು. ಬಸವಣ್ಣನವರ ಮಾರ್ಗದರ್ಶನದಲ್ಲಿ ಕಾಯಕವೇ ಕೈಲಾಸವೆಂಬ ವಚನದಂತೆ ನಡೆದು ಸಮಾಜಕ್ಕೆ ಆದರ್ಶಪ್ರಾಯರಾದರು. ಕಾಯಕ ಶರಣರ ಜೀವನ ಸರ್ವಕಾಲಕ್ಕೂ ಮಾದರಿಯಾದುದು ಎಂದು ಹೊಳಲ್ಕೆರೆ ತಹಶೀಲ್ದಾರ್ ಬೀಬಿ ಫಾತಿಮಾ ಹೇಳಿದರು. ಹೊಳಲ್ಕೆರೆ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತ್ಯೋ ತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಉರಿಲಿಂಗ ಪೆದ್ದಿ ಶರಣರು ಬಹಳಷ್ಟು ಕಷ್ಟ ನಷ್ಟದ ಜೀವನದಲ್ಲಿಯೂ ಸಂತೃಪ್ತಿಯ ಬದುಕಿಗೆ ಕಾಯಕ ಜೀವಿಗಳಾಗಿ ದುಡಿದರು. ಇವರೆಲ್ಲರ ಜೀವನ ನಮಗೆ ಸದಾ ಅನುಕರಣೀಯವಾದುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಎಂ.ಕುಬೇರಪ್ಪನವರು, ಕಾಯಕ ಶರಣರ ಜೀವನ ಚರಿತ್ರೆ ಕುರಿತು ವಿವರಿಸಿದರು. ಮಾದಾರ ಚೆನ್ನಯ್ಯನ ಭಕ್ತಿಗೆ ಶಿವನೇ ಪ್ರತ್ಯಕ್ಷನಾಗಿ ಬಂದ ಪ್ರತೀತಿಯಿದೆ. ಎಲ್ಲ ವೃತ್ತಿಗಳು ಸಮಾನ ಸ್ಥಾನಮಾನ ಹೊಂದಿರುತ್ತವೆ. ತಲೆಗೆ ಮುಡಿವ ಹೂವಿನ ಘನತೆ ಕಾಲಲಿ ಮೆಟ್ಟುವ ಚಪ್ಪಲಿಗೂ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶ್ಲಾಘಿಸಿ ಅಭಿನಂದಿಸಲಾಯಿತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಆರ್.ಪಾಂಡುರಂಗಪ್ಪ, ಜಿಲ್ಲಾ ಸಂಚಾಲಕರಾದ ಕೆಂಗುಂಟೆ ಜಯ್ಯಣ್ಣ, ಮಾತನಾಡಿದರು, ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ, ಬಿ.ಸಿ.ಎಂ ಅಧಿಕಾರಿ ಪ್ರದೀಪ್, ಮುಖಂಡರಾದ ಸುಂದರಮೂರ್ತಿ, ಪ್ರಸನ್ನಕುಮಾರ, ಶಿವಕುಮಾರ, ಮಂಜುನಾಥ್ ಮತ್ತು ತಾಲೂಕು ಆಡಳಿತ ಸಿಬ್ಬಂಧಿ ಮತ್ತಿತರರು ಉಪಸ್ಥಿತರಿದ್ದರು.ವಚನಕಾರರು ಸಮ ಸಮಾಜದ ನಿರ್ಮಾಣ ಆಶಯ ಹೊಂದಿದ್ದರು: ತಿಪ್ಪೇಸ್ವಾಮಿ
ಹಿರಿಯೂರು: ದಲಿತ ವಚನಕಾರರು ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ಶಿರಸ್ತೇದಾರ್ ತಿಪ್ಪೇಸ್ವಾಮಿ ಹೇಳಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಸಂಕವ್ವೆ, ಧೂಳಯ್ಯ, ಉರಿಲಿಂಗ ಪೆದ್ದಿ, ಆಯ್ದಕ್ಕಿ ಮಾರಯ್ಯರಿಗೆ ಸ್ಥಾನ ನೀಡಿ ವಚನ ರಚನೆಗೆ ಅವಕಾಶ ಮಾಡಿಕೊಡಲಾಗಿತ್ತು. ಸಮ ಸಮಾಜದ ನಿರ್ಮಾಣವಾಗಬೇಕು ಎಂಬುದು ಅವರೆಲ್ಲರ ವಚನಗಳ ಆಶಯವಾಗಿತ್ತು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.