-ಪೋಸ್ಟರ್ ಬಿಡುಗಡೆ ಮಾಡಿದ ಪ್ರಾಚಾರ್ಯ ಎಂ.ನಾಸಿರುದ್ದೀನ್ ಸಲಹೆ
-----------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಲು ಎನ್ ಪಿಇಪಿ(ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮ)ದಿಂದ ನಡೆಸುವ ಸ್ಪರ್ಧಾ ಚಟುವಟಿಕೆಗಳು ಸಹಕಾರಿ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.ನಗರದ ಡಯಟ್‍ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಸ್ಪರ್ಧಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲವನ್ನು ಬೆಳೆಸುವ ಸನ್ನಿವೇಶಗಳನ್ನು ಕಲ್ಪಿಸಿ ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಂತರ್ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪಾತ್ರಾಭಿನಯ, ಜನಪದ ನೃತ್ಯ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ತಾಲೂಕು ಹಂತದ ಅನುಷ್ಠಾನಾಧಿಕಾರಿಗಳು, ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.
ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನುಭವಾತ್ಮಕ ಕಲಿಕೆ, ಸಂವಾದಾತ್ಮಕ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿ ಆತ್ಮವಿಶ್ವಾಸ, ಸಂವೇದನಾಶೀಲತೆ, ವೈಯಕ್ತಿಕ ಸುರಕ್ಷತೆ, ಮಾನಸಿಕ ಒತ್ತಡ ನಿರ್ವಹಣೆ, ಸಕಾರಾತ್ಮಕ ಮನೋಭಾವನೆ ಬೆಳೆಸಲು ಎನ್‌ಇಪಿ ಸ್ಪರ್ಧಾ ಚಟುವಟಿಕೆಗಳು ಪೂರಕವಾಗಿವೆ. ಸ್ಪರ್ಧೆಗಳು 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ, ತಾಲೂಕು, ಜಿಲ್ಲಾ, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಹಂತದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಪ್ರತಿ ಸ್ಪರ್ಧೆಯು ಥೀಮ್ ಆಧಾರಿತವಾಗಿದ್ದು, ಪಾತ್ರಾಭಿನಯ ಸ್ಪರ್ಧೆಗೆ ನಿಗದಿಪಡಿಸಿರುವ ಆರೋಗ್ಯಕರ ಬೆಳವಣಿಗೆ, ಪೌಷ್ಠಿಕ ಆಹಾರ ಮತ್ತು ಯೋಗಕ್ಷೇಮ, ವೈಯಕ್ತಿಕ ಸುರಕ್ಷತೆ, ಅಂತರ್ಜಾಲ ಸುರಕ್ಷಿತ ಸದ್ಭಳಕೆ, ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ವಿಷಯಗಳಿವೆ. 9ನೇ ತರಗತಿಯ 4 ರಿಂದ 5 ವಿದ್ಯಾರ್ಥಿಗಳ ತಂಡ ಒಂದು ಥೀಮ್ ಆಯ್ಕೆ ಮಾಡಿಕೊಂಡು ಹಿಂದಿ/ಇಂಗ್ಲೀಷ್ ಭಾಷೆಯಲ್ಲಿ ಪ್ರಸ್ತುತ ಪಡಿಸಬೇಕು ಎಂದರು.
ಜನಪದ ನೃತ್ಯ ಸ್ಪರ್ಧೆಗೆ ನಿಗದಿಪಡಿಸಿರುವ ಹುಡುಗರು ಮತ್ತು ಹುಡುಗಿಯರಿಗೆ ಸಮಾನ ಅವಕಾಶ, ಮಗುವಿನ ಬೆಳವಣಿಗೆಯಲ್ಲಿ ಅವಿಭಕ್ತ ಕುಟುಂಬದ ಪಾತ್ರ, ಪರಿಸರ ಸಂರಕ್ಷಣೆ, ಮಾದಕ ವಸ್ತುವಿನ ದುರ್ಬಳಕೆ ತಡೆಗಟ್ಟುವಿಕೆ, ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಸಂಬಂಧದ ವಿಷಗಳಿವೆ. ಪ್ರತಿ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಪೂರ್ಣಿಮಾ, ಹೆಚ್.ಗಿರಿಜಾ, ಉಪನ್ಯಾಸಕರಾದ ಶಿವಲೀಲಾ, ರೇವಣ್ಣ, ಪದ್ಮ, ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್, ತಾಂತ್ರಿಕ ಸಹಾಯಕ ಲಿಂಗರಾಜು ಇದ್ದರು.
------------ಪೋಟೋ ಕ್ಯಾಪ್ಸನ
ನಗರದ ಡಯಟ್‍ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಕಾರ್ಯಕ್ರಮದ ಪೋಸ್ಟರನ್ನು ಪ್ರಾಚಾರ್ಯ ಎಂ.ನಾಸಿರುದ್ದೀನ್ ಬಿಡುಗಡೆ ಮಾಡಿದರು.-------
ಪೋಟೋ: 11 ಸಿಟಿಡಿ4