ಮಾಯಕೊಂಡ ಕ್ಷೇತ್ರ ಅಭಿವೃದ್ಧಿಗೆ ತಿಂಗಳ ಗಡುವು: ಬಿಜೆಪಿ

KannadaprabhaNewsNetwork | Published : Aug 12, 2024 12:46 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳಾದರೂ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳಲ್ಲೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಜಿ.ಸಚಿನ್‌ ಎಚ್ಚರಿಸಿದ್ದಾರೆ.

- ಕ್ಷೇತ್ರ ಅಭಿವೃದ್ಧಿ ಬಗ್ಗೆ ಶಾಸಕ ಕೆ.ಎಸ್.ಬಸವಂತಪ್ಪ ಅಸಡ್ಡೆ: ಯುವ ಮೋರ್ಚಾ ಅಧ್ಯಕ್ಷ ಬಿ.ಜಿ.ಸಚಿನ್ ಆಕ್ರೋಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳಾದರೂ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳಲ್ಲೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಜಿ.ಸಚಿನ್‌ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಕೇಳಿದರೂ ಕ್ಷೇತ್ರದ ಶಾಸಕ ಕೆ.ಎಸ್‌.ಬಸವಂತಪ್ಪ ಹಾರಿಕೆ ಉತ್ತರ ನೀಡುವ ಮೂಲಕ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ಬೇಸತ್ತಿದ್ದಾರೆ ಎಂದರು.

ಕ್ಷೇತ್ರ ಅಭಿವೃದ್ಧಿಗೆ ಅನುದಾನ ತಂದು, ಕಾಮಗಾರಿ ಕೈಗೊಳ್ಳುವಲ್ಲಿ ಶಾಸಕ ಬಸವಂತಪ್ಪ ವಿಫಲವಾಗಿದ್ದಾರೆ. ಕ್ಷೇತ್ರದಲ್ಲಿ ಕಮಿಷನ್ ದಂಧೆಯೂ ಎದ್ದುಕಾಣುತ್ತಿದೆ. ಕಾಮಗಾರಿಗೆ ಶೇ.10ರಷ್ಟು ಹಣ ಪಡೆಯುವ ದಂಧೆಯೂ ಕ್ಷೇತ್ರದಲ್ಲಿ ಶುರುವಾಗಿದೆ. ಅಲ್ಲದೇ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ತಂದಿದ್ದ ಅನುದಾನವನ್ನೇ ಬಳಸಿಕೊಂಡ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೇ, ಶಾಸಕರು ವಿಳಂಬ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರ ಇದ್ದಾಗ ಎಸ್ಇಪಿ, ಟಿಎಸ್‌ಪಿ ಯೋಜನೆಯಡಿ ಕರ್ನಾಟಕ ನೀರಾವರಿ ನಿಗಮದಿಂದ ₹15 ಕೋಟಿ ಮಂಜೂರಾಗಿದೆ. ಈ ಪೈಕಿ ಇನ್ನೂ ₹5 ಕೋಟಿಗಳಿಗೂ ಅಧಿಕ ಅನುದಾನದ ಕಾಮಗಾರಿಗಳು ಇನ್ನೂ ನಡೆದಿಲ್ಲ. ಯಾವುದೇ ಅನುದಾನ ತರದೇ, ಹಿಂದಿನ ಸರ್ಕಾರದ ಅನುದಾನವನ್ನು ಸರಿಯಾದ ರೀತಿ ಅನುಷ್ಠಾನಗೊಳಿಸದೇ, ಕೇವಲ ರಾಜಕಾರಣ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೀಸಲು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಸಂವಿಧಾನ ಪೂರಕವಾದ ಎಸ್‌ಇಪಿ, ಟಿಎಸ್‌ಪಿ, ಎಸ್‌ಸಿ-ಎಸ್‌ಟಿ ಅನುದಾನವನ್ನು ಸರಿಯಾದ ರೀತಿ ಬಳಸಲಿ. ಇಲ್ಲವಾದರೇ, ಈ ಅನುದಾನ ಸಹ ಸರ್ಕಾರಕ್ಕೆ ವಾಪಸ್‌ ಆಗುತ್ತದೆಂಬ ಸಂಗತಿ ಶಾಸಕರು ಅರಿಯಬೇಕು. ತಾವು ಅನುದಾನ ತರದೇ ಇದ್ದರೂ, ಈ ಹಿಂದಿನ ಸರ್ಕಾರದಲ್ಲಿ ಬಂದ ಅನುದಾನವನ್ನು ಸದ್ಭಳಕೆ ಮಾಡಿಕೊಂಡು, ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಇರುವ ಅನುದಾನವನ್ನೇ ಬಳಸಿಕೊಳ್ಳದೇ, ಮುಖ್ಯಮಂತ್ರಿ ಅವರ ಹಿಂದೆ ಮುಂದೆ ಓಡಾಡಿದರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಹಿಂದಿನ ಶಾಸಕರ ಅವದಿಯಲ್ಲಿ ಬಂದ ₹6.80 ಕೋಟಿ ಅನುದಾನ ಸಹ ಈಗಿನ ಶಾಸಕರು ಬಳಸಿಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ವಿಚಾರಗಳ ಬಗ್ಗೆ ಕೇಳಿದರೂ ಶಾಸಕರು ಹಾರಿಕೆ ಉತ್ತರ ನೀಡಿ, ಸುಮ್ಮನಾಗುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಮಾಯಕೊಂಡ ಕ್ಷೇತ್ರವನ್ನು ಅಧೋಗತಿಗೆ ತಳ್ಳುವ ಕೆಲಸವನ್ನು ಕಾಂಗ್ರೆಸ್ಸಿನ ಈ ಶಾಸಕರು ಮಾಡುತ್ತಿದ್ದಾರೆ ಎಂದು ಬಿ.ಜಿ. ಸಚಿನ್‌ ಟೀಕಿಸಿದರು.

- - -

ಬಾಕ್ಸ್‌ * ಶಾಸಕರಾಗಿ ಬಸವಂತಪ್ಪ ಏನು ಮಾಡಿದ್ದಾರೆ? ಚಿನ್ನಸಮುದ್ರ ಗ್ರಾಮದಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ಮಳೆನೀರು ನುಗ್ಗುತ್ತದೆ. ಅಲ್ಲಿಗೆ ಮಂಜೂರಾಗಿದ್ದ ಸೇತುವೆಯನ್ನು ಕಟ್ಟುವ ಕೆಲಸ ಮಾಡಿಲ್ಲ. ಬಸವಾಪಟ್ಟಣದ ಮುಖ್ಯ ರಸ್ತೆಯನ್ನು ಒಮ್ಮೆ ನೋಡಿದರೆ ಕ್ಷೇತ್ರದ ಪರಿಸ್ಥಿತಿ ಹೇಗಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಅಲ್ಲಿಗೆ ಮಂಜೂರಾದ ₹45 ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿ ಯಾಕೆ ಆರಂಭ ಮಾಡಿಲ್ಲ? ಹೋಬಳಿ ಮುಖ್ಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಶಾಸಕರಾಗಿ ಕೆ.ಎಸ್.ಬಸವಂತಪ್ಪ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

- - - -11ಕೆಡಿವಿಜಿ1:

ದಾವಣಗೆರೆಯಲ್ಲಿ ಭಾನುವಾರ ಮಾಯಕೊಂಡ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಜಿ.ಸಚಿನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article