ಹೂವಿನಹಡಗಲಿಯಲ್ಲಿ ಜೀವ ಜಲ ನಿತ್ಯ ಪೋಲು

KannadaprabhaNewsNetwork |  
Published : Jan 14, 2026, 03:45 AM IST
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದಲ್ಲಿ ಜಲ ಜೀವನ್‌ ಮಿಷನ್‌ನ ಪೈಪ್‌ಲೈನ್‌ ಸೋರಿಕೆಯಾಗಿ ಮನೆಗೆ ಸೇರಬೇಕಿದ್ದ ಗಂಗೆ ಚರಂಡಿ ಪಾಲಾಗುತ್ತಿದೆ. ನೀರಿಲ್ಲದ ನಳ. | Kannada Prabha

ಸಾರಾಂಶ

ಜಲ ಜೀವನ್‌ ಮಿಷನ್‌ ಯೋಜನೆಯಡಿ ಮನೆಗೆ ಸೇರಬೇಕಿದ್ದ ಗಂಗೆ ಹತ್ತಾರು ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆಯಿಂದ ಜೀವ ಜಲ ಚರಂಡಿ ಪಾಲಾಗುತ್ತಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಜಲ ಜೀವನ್‌ ಮಿಷನ್‌ ಯೋಜನೆಯಡಿ ಮನೆಗೆ ಸೇರಬೇಕಿದ್ದ ಗಂಗೆ ಹತ್ತಾರು ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆಯಿಂದ ಜೀವ ಜಲ ಚರಂಡಿ ಪಾಲಾಗುತ್ತಿದೆ. ಟೆಂಡರ್‌ ಅವಧಿ ಮೂರು ತಿಂಗಳು ಆದರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 7 ರಿಂದ 8 ಬಾರಿ ನೋಟಿಸ್‌ ನೀಡಿದರೂ ಗುತ್ತಿಗೆದಾರ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಜಲ ಜೀವನ್‌ ಮಿಷನ್‌ ಯೋಜನೆಯು 2020-21ರಲ್ಲಿ ಜಾರಿಯಾಗಿದೆ. ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯ ಕಾಮಗಾರಿಯು ಹತ್ತಾರು ಗೊಂದಲಗಳ ನಡುವೆ ಆರಂಭವಾಗಿದೆ.

ತಾಲೂಕಿನ ಮಾಗಳ ಗ್ರಾಮದಲ್ಲಿ 2024 ರಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯಡಿ ಬೇಡಿಕೆಯಂತೆ 900 ಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸಲು ₹1.98 ಕೋಟಿಗೆ ಟೆಂಡರ್‌ ಆಗಿದೆ. 3 ತಿಂಗಳ ಅವಧಿಗೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿದಾರರು ಸಮರ್ಪಕವಾಗಿ ಕಾರ್ಯ ನಿರ್ವಹಿಸದ್ದರಿಂದ ವರ್ಷ ಕಳೆದರೂ ಕಾಮಗಾರಿ ಮಾತ್ರ ಇನ್ನೂ ಅರೆಬರೆಯಾಗಿದೆ. ಪೈಪ್‌ಲೈನ್‌ ಸಂದರ್ಭದಲ್ಲಿ ಗ್ರಾಮದ ಮುಖ್ಯ ರಸ್ತೆಯ 1 ಕಿ.ಮೀ ಅಗೆದು, ಅದನ್ನು ದುರಸ್ತಿ ಮಾಡದೇ ರಸ್ತೆ ಹಾಳು ಮಾಡಿದ್ದಾರೆ. ಈ ಕುರಿತು ಯಾರೂ ಕ್ರಮ ಕೈಗೊಳ್ಳದ ಕಾರಣ ತಗ್ಗು ಗುಂಡಿಗಳಲ್ಲಿ ಜನ ಸಂಚರಿಸುತ್ತಿದ್ದಾರೆ.

ಮನೆಗಳ ನಳಕ್ಕೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್‌ ಕಾಮಗಾರಿ, ಹತ್ತಾರು ಕಡೆಗಳಲ್ಲಿ ಸೋರುತ್ತಿವೆ. ಇದರಿಂದ ಮನೆಗಳಿಗೆ ಸೇರಬೇಕಿದ್ದ ಗಂಗೆ ಚರಂಡಿ ಪಾಲಾಗುತ್ತಿದೆ. ಈವರೆಗೂ ನಳಗಳಿಗೆ ಬರುವ ನೀರನ್ನು ಪರೀಕ್ಷೆ ಮಾಡಿ, ಜನರಿಗೆ ಕುಡಿಯಲು ಯೋಗ್ಯ ನೀರು ಒದಗಿಸುವ ಕೆಲಸವನ್ನು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಡುತ್ತಿಲ್ಲ. ಈವರೆಗೂ ಮಾಗಳ ಗ್ರಾಮದ ಅರ್ಧ ಭಾಗ ಜನ ನದಿಯಿಂದ, ನೇರವಾಗಿ ಬರುವ ನೀರನ್ನೇ ಕುಡಿಯುತ್ತಿದ್ದಾರೆ. ಜಲ ಜೀವನ್‌ ಮೀಷನ್‌ನ ಮನೆ ಮನೆಗೆ ಗಂಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ.

3 ತಿಂಗಳ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ, 7 ರಿಂದ 8 ಬಾರಿ ಪತ್ರ ಬರೆದರೂ ಪತ್ರಕ್ಕೆ ಉತ್ತರ ನೀಡಿಲ್ಲ. ಮುಂದಿನ 2 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಇಲಾಖೆಯಿಂದ 3 ನೋಟಿಸ್‌ ಜಾರಿ ಮಾಡಿ ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮಾಗಳ ಗ್ರಾಮದ ಪೈಪ್‌ಲೈನ್‌ ಸೋರಿಕೆ ವಿಷಯ ಗುತ್ತಿಗೆದಾರರ ಗಮನಕ್ಕೆ ತಂದು, ಕಾಮಗಾರಿ ಪೂರ್ಣಗೊಳಿಸುತ್ತೇವೆ. ಮುಂದಿನ 2 ತಿಂಗಳೊಳಗೆ ಕಾಮಗಾರಿ ಮುಗಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ ಹೂವಿನಹಡಗಲಿಯ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್‌ ಚಂದ್ರಕಾಂತ್‌.

ಜಲ ಜೀವನ್‌ ಮಿಷನ್‌ ಅಡಿ ಮನೆ ಮನೆಗೆ ಗಂಗೆ ಹರಿದು ಬರುತ್ತಾಳೆಂದು ಎದುರು ನೋಡುತ್ತಿದ್ದೇವೆ. ಆದರೆ ವರ್ಷ ಕಳೆದರೂ ನಳದಲ್ಲಿ ಹನಿ ನೀರು ಬರುತ್ತಿಲ್ಲ. ಎಲ್ಲೆಂದರಲ್ಲಿ ಪೈಪ್‌ಲೈನ್‌ ಸೋರುತ್ತಿವೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಗುಣಮಟ್ಟದ ಕಾಮಗಾರಿ ಮಾಡಿಸಲಿ ಎನ್ನುತ್ತಾರೆ ಮಾಗಳ ಗ್ರಾಮಸ್ಥ ಹಲಗಿ ಹನುಮಂತಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ