- ನಾಗಲಾಪುರ ಗ್ರಾ.ಪಂ.ಮಟ್ಟದ ಸಂಜೀವಿನಿ ಒಕ್ಕೂಟದಿಂದ ಆರೋಗ್ಯ ತಪಾಸಣೆ । ಮಾದಕ ಮುಕ್ತ ಅಭಿಯಾನ ಜಾಗೃತಿ
ಮಾದಕ ವಸ್ತುಗಳನ್ನು ಬಳಸುವುದರಿಂದ ಮಾದಕ ವಸ್ತುಗಳನ್ನು ಸೇವಿಸುವ ವ್ಯಕ್ತಿ ಬಲಿಯಾಗಿ ಅವರ ಕುಟುಂಬವೂ ಸಂಕಷ್ಟಕ್ಕೆ ಸಿಲಕಲಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಎಚ್ಚರಿಸಿದರು.
ತಾಲೂಕಿನ ನಾಗಲಾಪುರ ಗ್ರಾ.ಪಂನಲ್ಲಿ ನಾಗಲಾಪುರ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟ, ಆರೋಗ್ಯ ಇಲಾಖೆ, ನಾಗಲಾಪುರ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಾದಕ ಮುಕ್ತ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಮಾದಕ ವಸ್ತುಗಳಿಂದ ಮನುಷ್ಯನ ಬದುಕು ಬರಿದಾಗಲಿದೆ. ಇವುಗಳ ಸೇವನೆಯಿಂದ ಸಮಾಜದ ಸ್ವಾಸ್ತ್ಯ ಹದಗೆಡಲಿದೆ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಯುವ ಜನರು ಹೆಚ್ಚೆಚ್ಚು ಈ ಮಾದಕ ವಸ್ತುಗಳ ದಾಸರಾಗುತ್ತಿದ್ದು ತಮ್ಮ ಉಜ್ವಲ ಭವಿಷ್ಯ ಹಾಳುಗೆಡವಿಕೊಳ್ಳುತ್ತಿದ್ದಾರೆ. ಕುಟುಂಬದ ಮಹಿಳೆ ಯರು ಈ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಒಕ್ಕೂಟಗಳು ಇಂದು ಹೆಚ್ಚೆಚ್ಚು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಕೇವಲ ಸಾಲ ಸೌಲಭ್ಯಕ್ಕಾಗಿ ಒಕ್ಕೂಟವನ್ನು ಬಳಸಿಕೊಳ್ಳದೆ ಸ್ವಯಂ ಉದ್ಯೋಗ ಸೃಷ್ಠಿಸಿವ ಮೂಲಕ ಆರ್ಥಿಕ ವಾಗಿ ಸಧೃಢರಾಗಬೇಕು. ಸಂಜೀವಿನಿ ಒಕ್ಕೂಟಗಳು ಮಹಿಳಾ ಸಬಲೀಕರಣದ ಕನಸು ಹೊಂದಬೇಕು. ಸಂಜೀವಿನಿ ಒಕ್ಕೂಟ ಈ ರೀತಿಯ ಸಾಮಾಜಿಕ ಜಾಗೃತಿ ಅರಿವು ಕಾರ್ಯಕ್ರಮ ಇನ್ನಷ್ಟು ನಡೆಸಬೇಕು ಎಂದು ಸಲಹೆ ನೀಡಿದರು.ನಾಗಲಾಪುರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಮಾತನಾಡಿ, ಸಂಜೀವಿನಿ ಒಕ್ಕೂಟದಿಂದ ಕೇವಲ ಸ್ವ ಸಹಾಯ ಸಂಘಗಳಿಗೆ ಜೀವನೋಪಾಯಕ್ಕೆ ಸಾಲ, ಸೌಲಭ್ಯ ಮಾತ್ರ ನೀಡುತ್ತಿಲ್ಲ. ಮಹಿಳೆಯರಿಗೆ ಹಾಗೂ ಸಾರ್ವಜ ನಿಕರಿಗೆ ಆರೋಗ್ಯ ಶಿಬಿರಗಳ ಮೂಲಕ ಆರೋಗ್ಯ, ಪೌಷ್ಟಿಕತೆ, ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮಸ್ಥರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಸರ್ಕಾರಿ ಆಸ್ಪತ್ರೆ ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ಕರ್ ಕ್ಷಯ ರೋಗದ ಬಗ್ಗೆ ಹಾಗೂ ಉಚಿತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಾದಕ ಮುಕ್ತ ಅಭಿಯಾನ ಬಗ್ಗೆ ಪ್ರತಿಜ್ಞೆ ಮಾಡಿಸಲಾಯಿತು. ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಾಗಲಾಪುರ ಗ್ರಾಪಂ. ಪಿಡಿಒ ಪ್ರೇಮಕುಮಾರ್, ಒಕ್ಕೂಟದ ಸಹ ಕಾರ್ಯದರ್ಶಿ ಸೌಮ್ಯ, ಖಜಾಂಚಿ ಸರ್ವಮಂಗಳ, ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕ ಗಿರೀಶ್, ಬಿಆರ್‌ಪಿ, ಸಿಆರ್‌ಪಿ ಮತ್ತು ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ವಿದ್ಯಾ, ರಾಧಾ, ರುಕ್ಸಾನ, ನಿರ್ಮಲಾ, ಅನ್ನಪೂರ್ಣ, ಸ್ವ ಸಹಾಯ ಸಂಘದ ಸದಸ್ಯರು, ಪಾಲ್ಗೊಂಡಿದ್ದರು.