ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ), ಮಣಿಪಾಲ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್, ಬೆಂಗಳೂರು (ಎಂಇಎಂಜಿ), ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ (ಎಂಎಂಎನ್‌ಎಲ್) ಹಾಗೂ ಡಾ. ಟಿ.ಎಂ.ಎ ಪೈ ಫೌಂಡೇಶನ್ ಸಹಯೋಗದಲ್ಲಿ ಜೀವಮಾನ ಸಾಧಕರಿಗೆ ನೀಡಲಾಗುವ ‘ಹೊಸ ವರ್ಷದ ಪ್ರಶಸ್ತಿ- 2026’ಗಳನ್ನು ಶನಿವಾರ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್ ಮತ್ತು ಎಂಇಎಂಜಿ ಅಧ್ಯಕ್ಷ ಡಾ. ರಂಜನ್ ಆರ್. ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಎಜಿಇ ಅಧ್ಯಕ್ಷ ಮತ್ತು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಮತ್ತು ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಟ್ರಸ್ಟಿ ಟಿ. ಸಚಿನ್ ಪೈ ಉಪಸ್ಥಿತರಿದ್ದರು. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ವಂದನಾರ್ಪಣೆ ಸಲ್ಲಿಸಿದರು.ಈ ಸಂದರ್ಭ ಮಾತನಾಡಿದ ಡಾ. ಎಚ್.ಎಸ್. ಬಲ್ಲಾಳ್, ‘ನಮ್ಮ ಸಮಾಜವನ್ನು ಶ್ರೀಮಂತಗೊಳಿಸಲು ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ ಈ ಸಾಧಕರನ್ನು ಗುರುತಿಸುವುದು ಕೇವಲ ಅಭಿನಂದನೆಯಲ್ಲ, ಬದಲಾಗಿ ಅದು ಸಮಾಜದ ಬೌದ್ಧಿಕ ಮತ್ತು ಸಾಂಸ್ಕೃತಿಕ ಬಲವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ ಎಂದರು.ಪ್ರಶಸ್ತಿ ಪುರಸ್ಕೃತ ಕೆ. ಜಯಪ್ರಕಾಶ್ ಹೆಗ್ಡೆ, ‘ನನಗೆ ರಾಜ್ಯ ಸರ್ಕಾರ ನೀಡಿದ ಜವಾಬ್ದಾರಿಯಿಂದ ಅನಾಥ ಮಕ್ಕಳಿಗೆ ಮೀಸಲಾತಿ, ಸಮಾನ ಅವಕಾಶ ನೀಡಲು ಸಾಧ್ಯವಾಗಿದೆ. ಬಹುಶಃ ಇಂಥ ಸಮಾಜಪರ ಕೆಲಸಗಳಿಂದಾಗಿಯೇ ನಾನು ಈ ಪ್ರಶಸ್ತಿ ಸ್ವೀಕರಿಸಲು ಅರ್ಹನಾಗಿದ್ದೇನೆʼ ಎಂದರು.ಡಾ. ತುಂಬೆ ಮೊಯ್ದೀನ್ , ‘ಈ ಪ್ರಶಸ್ತಿ ನನಗೆ ಸಿಕ್ಕ ಗೌರವ ಮಾತ್ರವಲ್ಲ, ಇದು ಇಡೀ ತುಂಬೆ ಸಮೂಹದ ಸಂಘಟಿತ ದೃಷ್ಟಿಕೋನ, ಬದ್ಧತೆಗೆ ಮನ್ನಣೆಯಾಗಿದೆ. ಮಾಹೆಯ ನಾವೀನ್ಯತೆ, ಸಹಾನುಭೂತಿ, ಶಿಕ್ಷಣ, ಸೇವೆ ಎಂಬ ಮೌಲ್ಯಗಳಿಂದ ಸಮಾಜದಲ್ಲಿ ಮಾಡುತ್ತಿರುವ ಪರಿವರ್ತನೆಯೇ ನನ್ನ ಸಂಸ್ಥೆಗಳ ಬೆಳವಣಿಗೆಗೆ ಬುನಾದಿಯಾಗಿದೆ ಎಂದರು.