ಬೆಂಗಳೂರು: ಕಷ್ಟಪಡದೆ ಯಾವುದನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ. ಇಷ್ಟಪಟ್ಟು ಕಷ್ಟಪಟ್ಚರೆ ಆಗ ಮಾತ್ರ ಸಾಧನೆ ಮೆಟ್ಟಿಲೇರಿ ಗುರಿ ತಲುಪಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅಭಿಪ್ರಾಯಪಟ್ಟರು.
ಜೀವಮಾನ ಸಾಧನೆ ಎಂದರೆ ಸುಮ್ಮನೆ ಸಿಗುವಂತದ್ದಲ್ಲ. ಕೇವಲ ಅದೃಷ್ಟದಲ್ಲಿ ಬರುವಂತದ್ದಲ್ಲ. ಸಮಾಜಕ್ಕೆ ನಾವು ಕೊಟ್ಟ ಕೊಡುಗೆಯೇನು? ಅದರಿಂದ ಯಾವ ಒಳಿತಾಗಿದೆ ಎಂಬುದರ ಆಧಾರದಲ್ಲಿ ಜೀವಮಾನದ ಸಾಧನೆಯನ್ನು ಪರಿಗಣಿಸಬೇಕಾಗುತ್ತದೆ. ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು, ರೈತರ ಮಗನಾಗಿ ಬೆಳೆದು ಬಂದ ರೀತಿ ಇತರರಿಗೆ ಮಾದರಿ. ಸಮಾಜಕ್ಕೆ ಮತ್ತು ಸಮಾಜದ ಬಗ್ಗೆ ಅವರಿಗೆ ಇದ್ದಂತ ಕಳಕಳಿ, ಸಹಾಯ ನೀಡುವ ಮನಸ್ಥಿತಿ ಶ್ಲಾಘನೀಯ ಎಂದರು.
ಆದಿಚುಂಚನಗಿರಿ ಮಠದಿಂದ ಒಕ್ಕಲಿಗ ಸಮುದಾಯದ ಯುವ ಜನರಿಗೆ ಅನುಕೂಲವಾಗುವಂತೆ ಐಎಎಸ್ ತರಬೇತಿ ಕೇಂದ್ರ ಮತ್ತು ಕಾನೂನು ಕಾಲೇಜು ತೆರೆಯಬೇಕು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಈ ಕುರಿತು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.ಅಭಿನಂದನೆ ಸ್ವೀಕರಿಸಿ ವಿಶ್ರಾಂತ ನ್ಯಾ.ಚಂದ್ರಶೇಖರಯ್ಯ ಅವರು ಮಾತನಾಡಿ, ರಾಜ್ಯ ಗ್ರಾಹಕ ವ್ಯಾಜ್ಯ ವ್ಯವಹಾರಗಳ ನ್ಯಾಯಾಧೀಕರಣದ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯ ನನಗೆ ತೃಪ್ತಿ ತಂದಿದೆ. ಕೆಲವು ಸಂದರ್ಭದಲ್ಲಿ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಶೋಷಿತರು, ಅನ್ಯಾಯಕ್ಕೆ ಒಳಗಾದವರನ್ನು ಕೈಬಿಡುವುದು ಸರಿಯಲ್ಲ. ಕಾನೂನು ಮೀರಿ ಅಂತಹವರ ನೆರವಿಗೆ ಬರಬೇಕಾಗುತ್ತದೆ. ಗ್ರಾಹಕ ವೇದಿಕೆಯಲ್ಲಿ ಅಂತಹ ಹಲವು ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ, ಐಎಎಸ್ ಅಧಿಕಾರಿಗಳಾದ ಪ್ರದೀಪ್ ಪ್ರಭಾಕರ್, ಎನ್.ಮಂಜುಶ್ರೀ, ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಇದ್ದರು.
ಫೋಟೋಬೆಂಗಳೂರಿನ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರ ಕಚೇರಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಹೈಕೋರ್ಟ್ ವಿಶ್ರಾಂತ ನ್ಯಾ.ಚಂದ್ರಶೇಖರಯ್ಯ ದಂಪತಿಯನ್ನು ಜೀವಮಾನ ಸಾಧನೆಗೆ ಅಭಿನಂದಿಸಲಾಯಿತು.