ಹಾನಗಲ್ಲ: ನೂತನ ಮೂರು ಮಹಡಿಗಳ ತಾಲೂಕು ಕಚೇರಿಗಳ ಸಂಕೀರ್ಣದಲ್ಲಿ ಐದಾರು ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು ವಯೋವೃದ್ಧರು, ವಿಶೇಷಚೇತನರು, ಅನಾರೋಗ್ಯದಿಂದ ಬಳಲುವ ಸಾರ್ವಜನಿಕರಿಗಾಗಿಯೇ ನಿರ್ಮಿಸಿದ ಲಿಫ್ಟ ಮಾತ್ರ ಕಾರ್ಯ ನಿರ್ವಹಿಸದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಆದರೆ ವಯೋವೃದ್ಧರು, ವಿಶೇಷಚೇತನರು, ಅನಾರೋಗ್ಯದಿಂದ ಬಳಲುವಂತಹವರು ಇಲ್ಲಿನ ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಸಂಪರ್ಕಿಸಲು ಇದ್ದ ಲಿಫ್ಟ ಮಾತ್ರ ಕಾರ್ಯ ನಿರ್ವಹಿಸದೇ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದೆ. ಈ ಬಗ್ಗೆ ಹಲವು ಬಾರಿ ಇಲ್ಲಿರುವ ಕಚೇರಿಗಳ ಮುಖ್ಯಸ್ಥರ ಗಮನಕ್ಕೆ ತಂದರೂ ಕೂಡ ಲಿಫ್ಟ ಮಾತ್ರ ಕೆಲಸ ನಿರ್ವಹಿಸುತ್ತಿಲ್ಲ.
ಪ್ರಯೋಜನವಾಗುತ್ತಿಲ್ಲ: ಇಲ್ಲಿರುವ ೬ ಕಚೇರಿಗಳಲ್ಲಿ ಲಿಫ್ಟಗೆ ಬಳಸಿದ ವಿದ್ಯುತ್ ಬಿಲ್ ಹಣ ಭರಿಸುವವರಾರು ಎಂಬ ಕಾರಣಕ್ಕೆ ಲಿಫ್ಟ್ ಕಾರ್ಯ ನಿಲ್ಲಿಸಲಾಗಿದೆ ಎನ್ನಲಾಗಿದೆ. ಬಿಲ್ ಬರುತ್ತಿರುವುದು ಈಗ ಸಮಾಜ ಕಲ್ಯಾಣ ಇಲಾಖೆಗೆ. ಆದರೆ ಎಲ್ಲ ಇಲಾಖೆಗಳೂ ಇದನ್ನು ಬಳಸುತ್ತವೆ. ನಾವಷ್ಟೇ ಏಕೆ ಬಿಲ್ ಭರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ತಿಂಗಳಿಗೆ ೬ರಿಂದ ೭ ಸಾವಿರ ರು. ಬಿಲ್ ಪಾವತಿಸಬೇಕಾಗಿದೆ. ಇದರಲ್ಲಿ ಕಾನೂನಾತ್ಮಕ ತಾಂತ್ರಿಕ ಸಮಸ್ಯೆಯೂ ಸೇರಿದ ಪರಿಣಾಮ ಸರ್ಕಾರ ಯಾವ ಉದ್ದೇಶಕ್ಕಾಗಿ ಲಿಫ್ಟ್ ಕೊಟ್ಟಿದೆಯೇ ಅದರ ಪ್ರಯೋಜನವಾಗುತ್ತಿಲ್ಲ.ಈ ಸಮಸ್ಯೆ ಪರಿಹಾರಕ್ಕೆ ತಾಲೂಕು ತಹಸೀಲ್ದಾರ್‌ರೊಂದಿಗೆ ಚರ್ಚಿಸಲಾಗಿದ್ದು, ಒಂದೊಂದು ತಿಂಗಳ ಬಿಲ್ ಒಂದೊಂದು ಇಲಾಖೆಗಳು ಭರಿಸಬೇಕು. ಒಂದು ವರ್ಷದಲ್ಲಿ ಒಂದು ಇಲಾಖೆಗೆ ಎರಡು ತಿಂಗಳ ಬಿಲ್ ಭರಿಸುವ ಸಂದರ್ಭ ಬರುತ್ತದೆ ಎನ್ನಲಾಗಿದೆ. ಈ ನಿಯಮಕ್ಕೆ ಎಲ್ಲ ಇಲಾಖೆಗಳು ಒಪ್ಪಿಕೊಂಡಂತಿದೆ. ಆದರೂ ಲಿಫ್ಟ್ ಮಾತ್ರ ಇನ್ನೂ ಆರಂಭವಾಗಿಲ್ಲ.
ನಿತ್ಯ ಸಾವಿರಾರು ಜನ ಇಲ್ಲಿರುವ ೬ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಅನಿವಾರ್ಯ. ಆದರೆ ಸರ್ಕಾರ ನೀಡಿರುವ ಲಿಫ್ಟ್ ಸೌಲಭ್ಯ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಇದು ಇದ್ದೂ ಇಲ್ಲದಂತಾಗಿರುವುದು ಮಾತ್ರ ಸಾರ್ವಜನಿಕರಿಗೆ ತೀರ ನೋವು ತಂದಿದೆ. ವೃದ್ಧರಾದಿಯಾಗಿ ಶಾರೀರಿಕ ದುರ್ಬಲರು ಮಹಡಿ ಏರಿ ಹೋಗುವುದು ತೀರ ತೊಂದರೆಯಾಗಿದೆ. ೪ ಮಹಡಿಯ ಕಟ್ಟಡಕ್ಕೆ ಸರ್ಕಾರ ಒದಗಿಸಿದ ಲಿಫ್ಟ್ ಮಾತ್ರ ಮೂಕ ಪ್ರೇಕ್ಷಕನಂತಾಗಿದೆ ಎಂದು ಕೊಪ್ಪರಸಿಕೊಪ್ಪ ಗ್ರಾಮಸ್ಥ ಅಶೋಕ ಜಾಧವ ಹೇಳಿದರು.