ಸಿಡಿಲಿಗೆ 7 ಮೇಕೆಗಳು ಸೇರಿ ಎತ್ತು, ಎಮ್ಮೆ ಸಾವು

KannadaprabhaNewsNetwork |  
Published : Jun 07, 2024, 12:15 AM IST
ರುದ್ರವಾಡಿಯಲ್ಲಿ ಸುರಿದ ಮಳೆ ನೀರು ಮನೆಗಳಿಗೆ ನುಗ್ಗಿ ಸಾಮಗ್ರಿ ಹಾನಿಯಾಗಿದೆ. | Kannada Prabha

ಸಾರಾಂಶ

ಸಿಡಿಲು ಬಡಿದು ಆಳಂದ ಠಾಣೆ ವ್ಯಾಪ್ತಿಯ ಮೋರಿಸಾಬ ತಾಂಡಾದಲ್ಲಿ ಒಂದು ಎತ್ತು ಸಾವನ್ನಪ್ಪಿದರೆ, ಮತ್ತೊಂದೆಡೆ ನಿರಗುಡಿ ಗ್ರಾಮದಲ್ಲಿ ವಲಸೆ ಕುರಿಗಾರರ 7 ಮೇಕೆಗಳು ಮತ್ತು ಕಿಣ್ಣಿಸುಲ್ತಾನದಲ್ಲಿ ಎಮ್ಮೆಯೊಂದು ಸಿಡಿಲಿಗೆ ಬಲಿಯಾಗಿರುವ ಕುರಿತು ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ಸಿಡಿಲು ಬಡಿದು ಆಳಂದ ಠಾಣೆ ವ್ಯಾಪ್ತಿಯ ಮೋರಿಸಾಬ ತಾಂಡಾದಲ್ಲಿ ಒಂದು ಎತ್ತು ಸಾವನ್ನಪ್ಪಿದರೆ, ಮತ್ತೊಂದೆಡೆ ನಿರಗುಡಿ ಗ್ರಾಮದಲ್ಲಿ ವಲಸೆ ಕುರಿಗಾರರ 7 ಮೇಕೆಗಳು ಮತ್ತು ಕಿಣ್ಣಿಸುಲ್ತಾನದಲ್ಲಿ ಎಮ್ಮೆಯೊಂದು ಸಿಡಿಲಿಗೆ ಬಲಿಯಾಗಿರುವ ಕುರಿತು ವರದಿಯಾಗಿದೆ.

ಮೋರಿಸಾಬ ತಾಂಡಾದಲ್ಲಿ ಇಸೂಫ್ ಇಶಾಕ್ ಜವಳ ಅವರಿಗೆ ಸೇರಿ 50 ಸಾವಿರ ರುಪಾಯಿ ಬೆಲೆಯ ಎತ್ತು ಮೃತಪಟ್ಟಿದೆ. ವಲಸೆ ಕುರಿಗಾರ ಅಮೋಘಸಿದ್ಧ ಧರ್ಮ ಗಾಡವೆಗೆ ಸೇರಿದ ಏಳು ಮೇಕೆಗಳು ಹಾಗೂ ಕಿಣ್ಣಿಸುಲ್ತಾನದ ಗ್ರಾಮದಲ್ಲಿನ ರಮೇಶ ಬಲಿರಾಮ ಚವ್ಹಾಣಗೆ ಸೇರಿದ ಎಮ್ಮೆ ಮೃತಪಟ್ಟಿದೆ.

ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ನಿಲಪ್ಪ ಇಂಗಳೆ ಮತ್ತು ಡಾ. ಮಹಾಂತೇಶ ಪಾಟೀಲ ಭೇಟಿ ನೀಡಿ ಪಂಚನಾಮ ನಡೆಸಿದ್ದಾರೆ.

ಮಂಗಳವಾರ ಮತ್ತು ಬುಧವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಖಜೂರಿ ವಲಯದ ರುದ್ರವಾಡಿ ಗ್ರಾಮದಲ್ಲಿ ಹೊಲಗಳಲ್ಲಿನ ಬದುಗಳು ಒಡೆದು ಗ್ರಾಮದ ಮನೆಗಳಲ್ಲಿ ನುಗ್ಗಿ ಮನೆಯಲ್ಲಿನ ಸಾಮಗ್ರಿಗಳ ಹಾಳಾಗಿ ನಷ್ಟಗೊಳಿಸಿದ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ರುದ್ರವಾಡಿ ಗ್ರಾಮದ ಸುತ್ತಮುತ್ತಲಿನಲ್ಲಿ ಸುರಿದ ಮಳೆಯಿಂದಾಗಿ ನೀರಿನ ಪ್ರವಾಹ ಉಕ್ಕಿ ಹರಿದು ನೀರಿನ ಪ್ರವಾಹದಿಂದಾಗಿ ಅನೇಕರ ಹೊಲಗಳ ಮಣ್ಣು ಕೊಚ್ಚಿಹೋಗಿದೆ. ಹೊಲದ ಬದುಗಳು ನಾಶವಾಗಿ ಹಾನಿಯಾಗಿದೆ.

ಮಳೆ ನೀರು ಮನೆಗಳಲ್ಲಿ ಅನೇಕರ ದವಸ ಧಾನ್ಯಗಳು ಹಾನಿಯಾಗಿದೆ. ಹೊಲಗಳಲ್ಲಿ ಮಳೆ ನೀರು ಹರಿಯುವ ದಿಕ್ಕು ಬದಲಿಸಿ ಅನ್ಯಮಾರ್ಗದಲ್ಲಿ ಪ್ರವಾಹ ಉಕ್ಕಿದ್ದರಿಂದ ಹೊಲಗಳಲ್ಲಿನ ಬದು ಒಡೆದು ರೈತರಿಗೆ ಹಾನಿಯಾಗಿದೆ. ಸಂಬಂಧಿತ ಗ್ರಾಪಂ ಅಧಿಕಾರಿಗಳು ಗ್ರಾಮದಲ್ಲಿ ಮಳೆ ನೀರು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಅವರು ಒತ್ತಾಯಿಸಿದ್ದಾರೆ.

ಮಳೆ ವಿವರ: ಜೂ.5ರಂದು ಆಳಂದನಲ್ಲಿ 108 ಮಿ.ಮೀ, ಖಜೂರಿ ವಲಯಕ್ಕೆ 74.2 ಮಿ.ಮೀ ಮಳೆಯಾಗಿದೆ. ನರೋಣಾ 4.0 ಮಿ.ಮೀ, ನಿಂಬರಗಾ 48 ಮಿ.ಮೀ, ಮಾದನಹಿಪ್ಪರಗಾ 11 ಮಿ.ಮೀ, ಸರಸಂಬಾ 39 ಮಿ.ಮೀ, ಕೋರಳ್ಳಿ 24.3 ಮಿ.ಮೀ ಮಳೆಯಾಗಿದೆ. ಜೂನ್ 3ರಂದು ನಿಂಬರಗಾದಲ್ಲಿ 38 ಮಿ.ಮೀ ಮಳೆಯಾದರೆ ಉಳಿದಡೆ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಬಿತ್ತನೆಗೆ ಸಿದ್ಧತೆ: ಆಳಂದ, ಖಜೂರಿ, ಕೋರಳ್ಳಿ ವಲಯದಲ್ಲಿ ಬಿತ್ತನೆಗೆ ನಿರೀಕ್ಷಿತ ಮಳೆಯಾದ ಹಿನ್ನೆಲೆಯಲ್ಲಿ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಮುಂದಾಗಿದ್ದಾರೆ. ಇನ್ನೂಳಿದ ಕಡೆ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆಗೆ ಬೀಜ, ಗೊಬ್ಬರ ಸಜ್ಜುಗೊಳಿಸತೊಡಗಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಶುರುವಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೀಜಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲತೊಡಗಿದ್ದಾರೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!