ವಾರ್ಡ್‌ಗಳಿಗೆ ಭೇಟಿ ನೀಡಿ ನಾಗರೀಕರ ಕುಂದುಕೊರತೆ ಆಲಿಸಿದ ನಗರಸಭಾಧ್ಯಕ್ಷ ಗಣೇಶ್‌

KannadaprabhaNewsNetwork |  
Published : May 16, 2025, 02:14 AM IST
56 | Kannada Prabha

ಸಾರಾಂಶ

ದಶಕಗಳ ಹಿಂದೆ ಸ್ಲಂ ಬೋರ್ಡಿನಿಂದ ಮಂಜೂರಾಗಿರುವ 25ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಈವರೆಗೆ ಮನೆಯ ಹಕ್ಕುಪತ್ರ ನೀಡಿಲ್ಲ,

ಕನ್ನಡಪ್ರಭ ವಾರ್ತೆ ಹುಣಸೂರು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಗುರುವಾರ ಪಟ್ಟಣದಲ್ಲಿ ಒಂದು ಮತ್ತು ಎರಡನೇ ವಾರ್ಡ್‌ಗಳಿಗೆ ಭೇಟಿ ನೀಡಿ, ನಿವಾಸಿಗಳಿಂದ ಕುಂದುಕೊರತೆ ಆಲಿಸಿದರು. ಈ ವೇಳೆ ಮಾತನಾಡಿದ 1ನೇ ವಾರ್ಡ್ ಸದಸ್ಯ ದೇವರಾಜ್, 25 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ನಿವೇಶನ ಪಡೆದ 30ಕ್ಕೂ ಹೆಚ್ಚು ಫಲಾನುಭವಿಗಳು ಇಂದಿಗೂ ತಗಡು ಶೀಟಿನ ಮನೆಯಲ್ಲಿ ಕಿಷ್ಕಿಂದೆಯಂತೆ 2-3 ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಟರೇ ಹೆಚ್ಚಾಗಿರುವ ಈ ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ದೀಪದ ಕಂಬದ ಕೆಳಗೆ ಕತ್ತಲೆ ಎನ್ನುವಂತೆ ವಾರ್ಡಿನಲ್ಲಿ 20 ಮನೆಗಳಿಗೆ ಕಳೆದ 20 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ವಂಚಿತ ಮನೆಗಳಿವೆ ಎನ್ನುವುದನ್ನು ಕೇಳಿ ನಗರಸಭಾಧ್ಯಕ್ಷರು ದಂಗಾದರು. ದಶಕಗಳ ಹಿಂದೆ ಸ್ಲಂ ಬೋರ್ಡಿನಿಂದ ಮಂಜೂರಾಗಿರುವ 25ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಈವರೆಗೆ ಮನೆಯ ಹಕ್ಕುಪತ್ರ ನೀಡಿಲ್ಲ, ಕಾರಣ ಎರಡು ಮೂರು ತಲೆಮಾರುಗಳಿಂದ ವಾಸಿಸುತ್ತಿದ್ದು, ಮೃತರ ಮರಣ ಪತ್ರ ಸಿಗದಿರುವ ಕಾರಣ ಸ್ಲಂ ಬೋರ್ಡ್‌ನಿಂದ ನೇರವಾಗಿ ಹಕ್ಕುಪತ್ರ ನೀಡಿ ನಂತರ ನಗರಸಭೆ ಖಾತೆ ಮಾಡಿಕೊಡಬೇಕೆಂದು ನಿರ್ಧರಿಸಲಾಗಿತ್ತು. ಈ ನಡುವೆ ಸರ್ಕಾರ ಇ ಸ್ವತ್ತು ದಾಖಲೆ ಹೊಂದಿರದ ಆಸ್ತಿಗಳಿಗೆ ಖಾತೆ ಮಾಡಿಕೊಡಬಾರದೆಂದು ಸರ್ಕಾರ ಆದೇಶಿಸಿರುವುದಿಂದ ಸಮಸ್ಯೆ ಕಗ್ಗಂಟಾಗಿದೆ ಎಂದು ದೇವರಾಜ್ ಮಾಹಿತಿ ನೀಡಿದರು. ಎರಡನೇ ವಾರ್ಡ್‌ನಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಲಾಗಿದೆ ಎಂದು ನಿವಾಸಿಗಳು ದೂರಿದಾಗ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.ನರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ವಾರ್ಡ್ ಒಂದರಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಪಡೆದ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲು ಶಾಸಕ ಜಿ.ಡಿ. ಹರೀಶ್‌ ಗೌಡ ಅವರಿಗೆ ಮನವಿ ಸಲ್ಲಿಸಲಾಗುವುದು. 20ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲವೆನ್ನುವುದೇ ಬೇಸರದ ವಿಷಯವಾಗಿದ್ದು, ಇನ್ನೆರಡು ದಿನಗಳಲಿ ಸೆಸ್ಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು. ಸ್ಲಂ ಬೋರ್ಡ್‌ನಿಂದ ನಿವೇಶನ ಪಡೆದವರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದು ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಖಾತೆ ಮಾಡಿಕೊಡಲು ಅಗತ್ಯ ಕ್ರಮಗಳನ್ನು ವಹಿಸಲಾಗುವುದೆಂದರು.ಭೇಟಿ ವೇಳೆ ನಗರಸಭಾ ಸದಸ್ಯೆ ಆಶಾ ಕೃಷ್ಣನಾಯಕ (ವಾರ್ಡ್ ನಂ.2), ಪೌರಾಯುಕ್ತೆ ಕೆ. ಮಾನಸ, ಎಇಇ ಶರ್ಮಿಳಾ, ಎಇ ಲೋಕೇಶ್, ಶಿವಕುಮಾರ್, ಆರ್.ಐ. ಸಿದ್ದಯ್ಯ, ಆರ್.ಒ. ಮಧುಸೂದನ್, ಸೊಹೈಲ್ ಸೇರಿದಂತೆ ನಿವಾಸಿಗಳು ಇದ್ದರು.ಇದೇ ವೇಳೆ ಬಿ ಖಾತಾ ಆಂದೋಲನ ಮುಂದುವೆರೆದಿದ್ದು, ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿ ಅರಿವು ಮೂಡಿಸಲಾಯಿತು. ಮೂರು ದಿನಗಳ ಹಿಂದೆ ಸುರಿದ ಮಳೆಗೆ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಮಾಹಿತಿ ದಾಖಲಿಸಿಕೊಂಡರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ