ಆಕಾಶ, ಸಮುದ್ರದಂತೆ ಡಾ.ರಾಜ್ ಕುಮಾರ್‌ಗೆ ಬೇರೆ ಯಾರೂ ಸರಿಸಾಟಿ ಇಲ್ಲ: ಡಾ.ಲತಾ ರಾಜಶೇಖರ್

KannadaprabhaNewsNetwork |  
Published : May 13, 2024, 12:00 AM IST
1 | Kannada Prabha

ಸಾರಾಂಶ

ಸಾಧಾರಣ ಕುಟುಂಬದಲ್ಲಿ ಜನಿಸಿದ ಡಾ. ರಾಜ್ ಅವರು, 4ನೇ ತರಗತಿ ಓದಿದ್ದು, ರಂಗಭೂಮಿಯಲ್ಲಿ ನಟನೆ ಮೂಲಕ ಚಿತ್ರರಂಗಕ್ಕೆ ಬಂದವರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಯಾವುದೇ ಪಾತ್ರ ನೀಡಿದರೂ ಅದರಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ನಟಿಸುತ್ತಿದ್ದರು. ಅವರ ಅಭಿನಯವನ್ನು ಈಗಲೂ ಯಾರು ಮರೆಯಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ವರನಟ ಡಾ.ರಾಜ್ ಕುಮಾರ್ ಅವರು ಮಹಾನ್ ಸಾಧಕರು, ಹಿಮಾಲಯದ ಎತ್ತರಕ್ಕೆ ಬೆಳೆದವರು. ಆಕಾಶಕ್ಕೆ ಆಕಾಶವೇ, ಸಮುದ್ರಕ್ಕೆ ಸಮುದ್ರವೇ ಸರಿಸಾಟಿಯಂತೇ ಡಾ. ರಾಜ್ ಕುಮಾರ್ ಅವರಿಗೆ ಬೇರೆ ಯಾರೂ ಸರಿಸಾಟಿ ಇಲ್ಲ. ಅವರನ್ನು ಬೇರೆ ಸಾಧಕರೊಂದಿಗೆ ಹೊಳಿಕೆ ಮಾಡಲು ಸಾಧ್ಯವಿಲ್ಲ ಎಂದು ಕವಯತ್ರಿ ಡಾ. ಲತಾ ರಾಜಶೇಖರ್ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಸಂಯುಕ್ತವಾಗಿ ಭಾನುವಾರ ಆಯೋಸಿದ್ದ ಡಾ.ರಾಜ್ ಸಾಧನಾ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರಿಗೆ ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಾಧಾರಣ ಕುಟುಂಬದಲ್ಲಿ ಜನಿಸಿದ ಡಾ. ರಾಜ್ ಅವರು, 4ನೇ ತರಗತಿ ಓದಿದ್ದು, ರಂಗಭೂಮಿಯಲ್ಲಿ ನಟನೆ ಮೂಲಕ ಚಿತ್ರರಂಗಕ್ಕೆ ಬಂದವರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಯಾವುದೇ ಪಾತ್ರ ನೀಡಿದರೂ ಅದರಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ನಟಿಸುತ್ತಿದ್ದರು. ಅವರ ಅಭಿನಯವನ್ನು ಈಗಲೂ ಯಾರು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಡಾ. ರಾಜ್ ಕುಮಾರ್ ಅವರು ಅದ್ಭುತ ನಟ ಮಾತ್ರವಲ್ಲದೇ ಸೊಗಸಾಗಿ ಸಾವಿರಾರು ಗೀತೆಗಳನ್ನು ಹಾಡಿದ್ದಾರೆ. ಸದಭಿರುಚಿಯ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅವರ ಚಿತ್ರಗಳನ್ನು ಇಡೀ ಕುಟುಂಬ ನೋಡುವಂತಹವು. ಆದರ್ಶ ನಾಯಕ ಪಾತ್ರಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದರು.

ನಾಡು ನುಡಿ ವಿಚಾರದಲ್ಲಿ ಮುಂದಿದ್ದ ಡಾ. ರಾಜ್ ಕುಮಾರ್ ಅವರು ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅವರಿಗೆ ಸಂದಿರುವ ಪ್ರಶಸ್ತಿಗಳಿಗೆ ಡಾ. ರಾಜ್ ಕುಮಾರ್ ಅವರಿಂದ ಗೌರವ ಹೆಚ್ಚಾಗಿದೆ. ಸರಳತೆ, ವಿನಯಶೀಲತೆ ಮೈಗೂಡಿಸಿಕೊಂಡಿದ್ದ ಅವರು, ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು ಎಂದು ಅವರು ತಿಳಿಸಿದರು.

ಅಭಿನಂದನೆ- ಪ್ರಶಸ್ತಿ ಪ್ರದಾನ:

ಇದೇ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರನ್ನು ಗೌರವಿಸಲಾಯಿತು. ನಂತರ ಎನ್. ಧನಂಜಯ (ಹವ್ಯಾಸಿ ರಂಗಭೂಮಿ), ಡಾ. ಪೂರ್ಣಿಮಾ ಮಧುಸೂದನ್(ವೈದ್ಯಕೀಯ), ಕೆ. ರಮೇಶ್ (ಸಾಹಿತ್ಯ), ಆರ್.ಡಿ. ಕುಮಾರ್ (ಕಾನೂನು ಮತ್ತು ಸಂಘಟನೆ), ರಮೇಶ್ ಕುಮಾರ್ (ಗಾಯನ) ಹಾಗೂ ಭಾಗ್ಯಲಕ್ಷ್ಮಿ (ಭರತನಾಟ್ಯ) ಅವರಿಗೆ ಡಾ. ರಾಜ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತದನಂತರ ಡಾ. ರಾಜ್ ಕಾವ್ಯಗೌರವ- ಡಾ. ರಾಜ್ ಕುರಿತ ಕವಿತೆಗಳನ್ನು ಕವಿಗಳು ವಾಚಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಸಮಾಜ ಸೇವಕ ಕೆ. ರಘುರಾಂ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಮರಿಮಲ್ಲಪ್ಪ ಪಿಯು ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಇದ್ದರು. ರಂಗನಾಥ್ ಮೈಸೂರು ಸ್ವಾಗತಿಸಿದರು.

ಸಾಧಕರು ತಮ್ಮ ಸ್ವಾರ್ಥ ಬಿಟ್ಟು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ಸೇವೆ ಮಾಡುತ್ತಿರುವುದು ಶ್ಲಾಘನೀಯ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಅವರು ಇನ್ನಷ್ಟು ಸಾಧಿಸಲು ಪ್ರೇರಪಣೆ ಆಗುತ್ತದೆ. ಹೀಗಾಗಿ, ಸಾಧಕರು ಮತ್ತಷ್ಟು ಸಾಧಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು.

- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯರು

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ