ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಹರಾಜಪುರಭಗವದ್ಗೀತೆ ಪಠಣ ಮಾಡುವುದರಿಂದ ಆಪಾರವಾದ ಜ್ಞಾನ, ವಿದ್ವತ್ ಜ್ಞಾನ ಸಿಗಲಿದೆ ಎಂದು ವಿಶ್ವ ಕರ್ಮ ಸಮಾಜ ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಭಾಸ್ಕರಾಚಾರ್ಯ ತಿಳಿಸಿದರು.
ಭಾನುವಾರ ಸಿಂಸೆಯ ವಿಶ್ವ ಸಮುದಾಯ ಭವನದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಸ್ವಾಮಿ ಆದಿ ದೇವಾನಂದರ ಶ್ರೀಮದ್ ಭಗವದ್ಗೀತಾ ಕೃತಿ ಮೇಲೆ ವಿಶ್ವ ಕರ್ಮ ಸಮಾಜದವರಿಗಾಗಿ ಏರ್ಪಡಿಸಿದ್ದ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಸ ಪ್ರಶ್ನೆ ಸ್ಪರ್ಧೆಗೆ ಈಗಾಗಲೇ ಎಲ್ಲರಿಗೂ ಭಗವದ್ಗೀತೆ ಪುಸ್ತಕವನ್ನು ನೀಡಿದ್ದೇವೆ. ಭಗವದ್ಗೀತೆ ಪುಸ್ತಕ ಓದಿದರೆ ನಮಗೆ ಭೌತಿಕವಾಗಿ, ಆಧ್ಯಾತ್ಮಿಕ ಉತ್ತಮ ಚಿಂತನೆ ಬರಲಿದೆ. ಮುಂದಿನ ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳಲು ಸ್ಫೂರ್ತಿ ಬರಲಿದೆ. ಪ್ರತಿ ನಿತ್ಯ ಭಗವದ್ಗೀತೆ ಓದಬೇಕು. ಗಾಯಿತ್ರಿ ಮಂತ್ರ ಹೇಳುವಾಗ, ಭಗವದ್ಗೀತೆ ಪಠನ ಮಾಡುವಾಗ ನಮಗೆ ಉತ್ತಮ ಪ್ರೇರಣೆ ದೊರೆಯಲಿದೆ. ನಮ್ಮ ದೇಹದಲ್ಲಿ ಆತ್ಮ ಇದೆ. ಪರಮಾತ್ಮ ಇದ್ದಾನೆ. ಪ್ರತಿ ನಿತ್ಯ ಭಗವದ್ಗೀತೆ ಪಠಣ ಮಾಡಬೇಕು ಎಂದು ಶ್ರೀ ಕೃಷ್ಣ ಹೇಳಿದ್ದಾನೆ.ಯುವ ಪೀಳಿಗೆಯವರಿಗೆ ಭಗವದ್ಗೀತೆ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂಬುದು ಈ ರಸ ಪ್ರಶ್ನೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಸಭೆ ಅದ್ಯಕ್ಷತೆ ವಹಿಸಿದ್ದ ವಿಶ್ವ ಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ ಮಾತನಾಡಿ, ಭಗವದ್ಗೀತೆ ಸಾರಾಂಶಗಳು ಸಮಾಜದ ಎಲ್ಲರಿಗೂ ಮುಟ್ಟಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಭಗವದ್ಗೀತೆ ಕಲಿಯಬೇಕು ಎಂಬ ತುಡಿತ ನಮ್ಮ ಸಮಾಜ ಬಾಂಧವರಿಗಿದೆ. 100 ಭಗವದ್ಗೀತೆ ಪುಸ್ತಕವನ್ನು ಈ ಮೊದಲೇ ರಸಪ್ರಶ್ನೆಯಲ್ಲಿ ಹೆಸರು ನೋಂದಾಯಿಸದವರಿಗೆ ಹಂಚಲಾಗಿದೆ. ಸಮಾಜ ಬಾಂಧವರು ನಮ್ಮ ಕಾರ್ಯಕ್ರಮಗಳಿಗೆ ಸ್ಪಂದಿಸಿ ಭಾಗವಹಿಸಬೇಕು. ಬಹುಮಾನ ಬರುತ್ತದೆ ಎಂಬುದಕ್ಕಿಂತ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ. ರಸಪ್ರಸ್ನೆ ಸ್ಪರ್ಧೆಯಲ್ಲಿ 5 ಜನರ ತಂಡಗಳಿದ್ದು ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ 5 ಬಹುಮಾನ ನೀಡಲಾಗುವುದು ಎಂದರು.ವಿಶ್ವ ಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಉಪಾಧ್ಯಕ್ಷ ಕಿಶೋರ್ ಪೇಜಾವರ್ ಉದ್ಘಾಟಿಸಿದರು. ಅತಿಥಿಗಳಾಗಿ ಚಿಕ್ಕಮಗಳೂರು ಬಿಎಸ್‌ಎನ್‌ಎಲ್ ಅಧಿಕಾರಿ ಪರಮೇಶ್ವರ ಆಚಾರ್ಯ, ತೀರ್ಪುಗಾರರಾದ ಶೋಭಾ ಆಚಾರ್ಯ, ಹರಿಹರಪುರ ಪಶು ವೈದ್ಯಾಧಿಕಾರಿ ಅರವಿಂದ ಆಚಾರ್ಯ, ತಾಲೂಕು ಅಧ್ಯಕ್ಷ ರಾಜೇಶ ಆಚಾರ್ಯ, ಗಾಯಿತ್ರಿ ಮಹಿಳಾ ವಿಶ್ವ ಸಮಾಜ ಸೇವಾ ಸಂಘದ ಅಧ್ಯಕ್ಷೆ ಜಯಶ್ರೀ ಆಚಾರ್ಯ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಚಿಕ್ಕಮಗಳೂರು ಅಂಚೆ ಇಲಾಖೆ ಅಧಿಕಾರಿ ಸತೀಶ್ ಆಚಾರ್ಯ, ಶೃಂಗೇರಿ ಕ್ಷೇತ್ರದ ಸಹ ಕಾರ್ಯದರ್ಶಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ವೆಂಕಪ್ಪ ಆಚಾರ್ಯ, ನಿವೃತ್ತ ವಲಯ ಅರಣ್ಯಾಧಿಕಾರಿ ಲಿಂಗಪ್ಪ ಆಚಾರ್ಯ, ಶೃಂಗೇರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ಯ ಇದ್ದರು.