ತಿಪಟೂರು: ನಗರದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಗಸ್ತು ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ. ತಿಪಟೂರು ನಗರದ ಕೋಡಿ ಸರ್ಕಲ್‌ನಿಂದ ತುರುವೆಕೆರೆಗೆ ಹೋಗುವ ರಸ್ತೆಯ ಸೇತುವೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಶೋಧಿಸಿದಾಗ, ಕೆಂಪು ಬಣ್ಣದ ಬ್ಯಾಗ್‌ನಲ್ಲಿ ಖಾಕಿ ಬಣ್ಣದ ಟೇಪ್‌ನಿಂದ ಸುತ್ತಿದ ಹೂ, ಬೀಜ ಮತ್ತು ತೆನೆ ಮಿಶ್ರಿತ ಮೂರು ಪೊಟ್ಟಣಗಳಲ್ಲಿ ಒಟ್ಟು ೯.೦೬೫ ಕೆ.ಜಿ. ಒಣ ಗಾಂಜಾವನ್ನು ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಪತ್ತೆಯಾಯಿತು. ಬಂಧಿತನನ್ನು ಅಖಿಲೇಶ (೩೪) ಎಂದು ಗುರುತಿಸಲಾಗಿದ್ದು ಹಾಲಿಯಾಗಿ ಈತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೋಟ ಬೇಂಗ್ರೆ, ಕುಳೂರಿನಲ್ಲಿ ಇದ್ದು, ಮೂಲತಃ ಉತ್ತರ ಪ್ರದೇಶದ ಅಜಂಘಡ್ ಜಿಲ್ಲೆಯ ರೌನಪಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಉಸರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಜಪ್ತಿಯಾದ ಗಾಂಜಾದ ಅಂದಾಜು ಮೌಲ್ಯ ರು.೪,೫೦,೫೨೫ ಎನ್ನಲಾಗಿದೆ. ಆರೋಪಿತನ ವಿರುದ್ಧ, ೧೯೮೫ ಎನ್‌ಡಿಪಿಎಸ್ ಕಾಯ್ದೆ ಯ ಕಲಂ ೮(ಸಿ) ಉಲ್ಲಂಘನೆ ಅನ್ವಯ ಪ್ರಕರಣ ದಾಖಲಾಗಿದ್ದು, ಅಬಕಾರಿ ಉಪ ನಿರೀಕ್ಷಕರು ಬಸವರಾಜ ಕರಕಣ್ಣವರ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರು ಜಿ.ವಿ. ವಿಜಯಕುಮಾರ, ಅಬಕಾರಿ ನಿರೀಕ್ಷಕರು ಸುರೇಶ್ ಎಂ.ಎನ್., ಅಬಕಾರಿ ಮುಖ್ಯ ಪೇದೆ ಶಿವಶಂಕರಯ್ಯ, ಪೇದೆ ಯತೀಶ ಎನ್.ಆರ್. ಹಾಗೂ ವಾಹನ ಚಾಲಕ ಮುನಿರಾಜು ಭಾಗವಹಿಸಿದ್ದರು.