ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಲಿಂಬಿಕಾಯಿ ಕಾಂಗ್ರೆಸ್‌ ಅಭ್ಯರ್ಥಿ!

KannadaprabhaNewsNetwork |  
Published : Dec 31, 2025, 02:30 AM IST
5445546 | Kannada Prabha

ಸಾರಾಂಶ

ಕಾಂಗ್ರೆಸ್ಸಿನಲ್ಲಿ ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದರೂ ಇದೇ ಮೊದಲ ಬಾರಿಗೆ ಚುನಾವಣೆಗೆ 11 ತಿಂಗಳು ಬಾಕಿಯಿರುವಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ಟಿಕೆಟ್‌ ವಂಚಿತರಿಂದ ಭಾರೀ ಭಿನ್ನಮತ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ 2026ರ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿ ವಿಧಾನಪರಿಷತ್‌ ಮಾಜಿ ಸದಸ್ಯ ಹುಬ್ಬಳ್ಳಿಯ ಮೋಹನ ಲಿಂಬಿಕಾಯಿ ಅವರನ್ನು ಘೋಷಿಸಿದೆ.

ಈ ಮೂಲಕ ಚುನಾವಣೆಗೆ ಈಗಲೇ ರಂಗೇರಿದಂತಾಗಿದೆ. ಕಾಂಗ್ರೆಸ್ಸಿನಲ್ಲಿ ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದರೂ ಇದೇ ಮೊದಲ ಬಾರಿಗೆ ಚುನಾವಣೆಗೆ 11 ತಿಂಗಳು ಬಾಕಿಯಿರುವಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ಟಿಕೆಟ್‌ ವಂಚಿತರಿಂದ ಭಾರೀ ಭಿನ್ನಮತ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದನ್ನು ನಿಭಾಯಿಸುವುದೇ ಅಭ್ಯರ್ಥಿ ಹಾಗೂ ಪಕ್ಷಕ್ಕೆ ದೊಡ್ಡ ಸವಾಲಾಗಲಿದೆ. ಇದರ ನಡುವೆ ಮೋಹನ ಲಿಂಬಿಕಾಯಿ ಮತ್ತೊಮ್ಮೆ ದಾಖಲೆ ನಿರ್ಮಿಸುತ್ತಾರಾ? ಎಂಬ ಕುತೂಹಲವೂ ಉಂಟಾಗಿದೆ.

ಮತದಾರರ ನೋಂದಣಿ:

2026ರ ನವೆಂಬರ್‌ನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಿನಿಂದಲೇ ಮತದಾರರ ನೋಂದಣಿ ಶುರುವಾಗಿದೆ. ಯಾರು ಹೆಚ್ಚು ನೋಂದಣಿ ಮಾಡಿಸುತ್ತಾರೋ ಅವರಿಗೆ ಟಿಕೆಟ್‌ ಎಂಬ ಮಾತಿತ್ತು. ಪಕ್ಷವೂ ಈ ಸೂಚನೆ ನೀಡಿತ್ತು. ಅದರಂತೆ ಆಕಾಂಕ್ಷಿಗಳೆಲ್ಲರೂ ನೋಂದಣಿ ಮಾಡಿಸುತ್ತಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಆರ್‌.ಎಂ. ಕುಬೇರಪ್ಪ, ಸದಾನಂದ ಡಂಗನವರ, ಬಸವರಾಜ ಗುರಿಕಾರ, ನಾಗರಾಜ ಮತ್ತಿಕಟ್ಟಿ ಸೇರಿದಂತೆ ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದರು. ಆದರೆ ಎಐಸಿಸಿ ಇದೀಗ ಇದೇ ಕ್ಷೇತ್ರದ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರ ಹೆಸರನ್ನು ಅಖೈರುಗೊಳಿಸಿದೆ.

ಏಕೆ ಲಿಂಬಿಕಾಯಿ?

ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಕ್ಷೇತ್ರವೇ ಎನಿಸಿತ್ತು. ಮೊದಲ 3 ಚುನಾವಣೆಗಳಲ್ಲಿ ವೈ.ಎಸ್‌. ಪಾಟೀಲ ಎನ್ನುವವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಬಳಿಕ 1984ರಲ್ಲಿ ಎಚ್‌.ಕೆ. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯಕ್ಕೆ ಹಾಗೂ ವಿಧಾನಪರಿಷತ್‌ಗೆ ಎಂಟ್ರಿ ಕೊಟ್ಟಿದ್ದರು. 1990, 1996, 2002 ಹೀಗೆ ಬರೋಬ್ಬರಿ ನಾಲ್ಕು ಬಾರಿ ಗೆಲವು ಸಾಧಿಸಿದ್ದರು ಎಚ್‌.ಕೆ. ಪಾಟೀಲ.

2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಇದೇ ಮೋಹನ ಲಿಂಬಿಕಾಯಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲದೇ, ಕಾಂಗ್ರೆಸ್‌ ಕ್ಷೇತ್ರವಾಗಿದ್ದ ಇದನ್ನು ಬಿಜೆಪಿ ವಶಕ್ಕೆ ನೀಡಿದ್ದರು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಲಿಂಬಿಕಾಯಿ, 2013ರಲ್ಲಿ ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕೆಜಿಪಿಯೊಂದಿಗೆ ಗುರುತಿಸಿಕೊಂಡು ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2014, 2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್‌.ವಿ. ಸಂಕನೂರ ಆಯ್ಕೆಯಾದರು. ಹೀಗಾಗಿ 3 ಚುನಾವಣೆಯಿಂದ ಬಿಜೆಪಿ ವಶದಲ್ಲಿದೆ ಈ ಕ್ಷೇತ್ರ.

ಈ ನಡುವೆ 2022ರ ವರೆಗೂ ಬಿಜೆಪಿಯಲ್ಲೇ ಇದ್ದ ಲಿಂಬಿಕಾಯಿ, ಶಿಕ್ಷಕರ ಕ್ಷೇತ್ರದ ಟಿಕೆಟ್‌ ತಪ್ಪಿದ್ದರಿಂದ ಕಾಂಗ್ರೆಸ್‌ ಸೇರಿದ್ದರು. ಪಶ್ಚಿಮ ವಿಧಾನಸಭೆ ಕ್ಷೇತ್ರದ ಟಿಕೆಟ್‌ ಕಾಂಗ್ರೆಸ್‌ನಿಂದ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ ಆಗ ಟಿಕೆಟ್‌ ತಪ್ಪಿತ್ತು. ಹೇಗಾದರೂ ಇವರು ತಮ್ಮ ಬಳಿಯಿದ್ದ ಕ್ಷೇತ್ರವನ್ನು ಬಿಜೆಪಿಗೆ ಒಯ್ದವರು. ಇದೀಗ ಅವರೇ ಮರಳಿ ಪಕ್ಷಕ್ಕೆ ತೆಗೆದುಕೊಂಡು ಬರುವ ಸಾಧ್ಯತೆ ಇದೆ ಎಂದುಕೊಂಡು ಕಾಂಗ್ರೆಸ್‌ ಇವರನ್ನೇ ಅಂತಿಮಗೊಳಿಸಿದೆ. ಕಾಂಗ್ರೆಸ್‌ ಕ್ಷೇತ್ರವನ್ನು ಬಿಜೆಪಿಯಿಂದ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದ ಲಿಂಬಿಕಾಯಿ, ಅದೇ ಕ್ಷೇತ್ರದಲ್ಲಿ ಗೆದ್ದು ಕ್ಷೇತ್ರವನ್ನು ಕೈಗೆ ನೀಡಿ ಮತ್ತೆ ದಾಖಲೆ ಬರೆಯುತ್ತಾರಾ? ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಗೆಲ್ಲುವ ವಿಶ್ವಾಸ:

ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರವೂ ಬರೋಬ್ಬರಿ 23 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. 23ರಲ್ಲಿ 17 ಜನ ಕಾಂಗ್ರೆಸ್‌ ಶಾಸಕರಿದ್ದರೆ, 6 ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಗೆಲ್ಲುವ ಅವಕಾಶ ಹೆಚ್ಚಿದೆ. ಈ ಸಲ ಕ್ಷೇತ್ರವನ್ನು ಕಾಂಗ್ರೆಸ್‌ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂಬ ವಿಶ್ವಾಸ ಕಾಂಗ್ರೆಸ್ಸಿನವರದು.ತಮ್ಮ ಹೆಸರನ್ನು ಅಂತಿಮಗೊಳಿಸಿರುವುದು ಸಂತಸಕರ. ಇದಕ್ಕಾಗಿ ಪಕ್ಷದ ಎಲ್ಲ ಹಿರಿಯರು, ಕಿರಿಯರಿಗೆ ಧನ್ಯವಾದ ತಿಳಿಸುತ್ತೇನೆ. ಚುನಾವಣೆ ತಯಾರಿ ಈಗಾಗಲೇ ನಡೆದಿದೆ. ಈ ಸಲ ಕಾಂಗ್ರೆಸ್‌ ಕ್ಷೇತ್ರ ಮತ್ತೆ ಗೆಲ್ಲುವುದು ಗ್ಯಾರಂಟಿ.

- ಮೋಹನ ಲಿಂಬಿಕಾಯಿ, ಕಾಂಗ್ರೆಸ್‌ ನಿಯೋಜಿತ ಅಭ್ಯರ್ಥಿಬಿಜೆಪಿ ಯಾರಾಗ್ತಾರೆ?

ಬಿಜೆಪಿಯಲ್ಲೂ ಹಾಲಿ ಸದಸ್ಯ ಎಸ್‌.ವಿ. ಸಂಕನೂರ, ಲಿಂಗರಾಜ ಪಾಟೀಲ, ಶಿವು ಹಿರೇಮಠ, ಜಯತೀರ್ಥ ಕಟ್ಟಿ, ರಾಜಣ್ಣ ಕೊರವಿ, ಬಸವರಾಜ ದಂಡಿನ, ವಸಂತ ಹೊರಟ್ಟಿ ಸೇರಿದಂತೆ 12ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಲಿಂಗರಾಜ ಪಾಟೀಲ ಈ ಸಲ ಅತ್ಯಂತ ಪ್ರಬಲ ಆಕಾಂಕ್ಷಿಯಾಗಿದ್ದು, ಮುಂಚೂಣಿಯಲ್ಲಿದ್ದಾರೆ. ಇದೀಗ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದ್ದು ಬಿಜೆಪಿ ಯಾವಾಗ ತನ್ನ ಅಭ್ಯರ್ಥಿ ಘೋಷಿಸುತ್ತದೆ. ಇಷ್ಟು ಜನರಲ್ಲಿ ಎದುರಾಳಿ ಯಾರಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ