ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು, ಎಂ.ಜಿ. ರಸ್ತೆ, ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಡಾ. ಗುರುರಾಜ್ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಹಾಗೂ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಸನ ಜಿಲ್ಲಾ ಚಾಮರಾಜೇಂದ್ರ ಆಸ್ಪತ್ರೆ ರಕ್ತ ನಿಧಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವಿವಿಧ ಭಾಗಗಳಲ್ಲಿ ಸೋಮವಾರ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಅಗತ್ಯವಿರುವ ರೋಗಿಗಳಿಗೆ ರಕ್ತದ ಕೊರತೆ ತಗ್ಗಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಇದೇ ವೇಳೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಶಬ್ಬೀರ್ ಅಹಮದ್ ಮಾಧ್ಯಮದೊಂದಿಗೆ ಮಾತನಾಡಿ, ದಿವಂಗತ ಡಾ. ಗುರುರಾಜ್ ಹೆಬ್ಬಾರ್ ಅವರ ಜನ್ಮ ದಿನಾಚರಣೆ ಜನವರಿ ೧ರಂದು ನಡೆಯಲಿದ್ದು, ಇದರ ಪ್ರಯುಕ್ತ ನಗರದೆಲ್ಲೆಡೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ರೋಗಿಗಳ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ್ದ ವೈದ್ಯರಾಗಿದ್ದು, ಅವರ ಮಾನವೀಯ ಸೇವೆಯ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಡಾ. ಹೆಬ್ಬಾರ್ ಅವರ ಸೇವಾ ಮನೋಭಾವ ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿ ಎಂಬ ಆಶಯವನ್ನು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು.ಶಿಬಿರದ ಅವಧಿಯಲ್ಲಿ ಹಿಮ್ಸ್ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ರಕ್ತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಿ, ರಕ್ತದಾನಿಗಳ ಆರೋಗ್ಯ ತಪಾಸಣೆ ನಡೆಸಿದರು. ರಕ್ತದಾನಿಗಳ ಸುರಕ್ಷತೆ ಹಾಗೂ ಆರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಈ ಕಾರ್ಯಕ್ರಮವು ದಿವಂಗತ ಡಾ. ಗುರುರಾಜ್ ಹೆಬ್ಬಾರ್ ಅವರ ಸ್ಮರಣೆಯನ್ನು ಜೀವಂತವಾಗಿಟ್ಟುಕೊಂಡು, ಸಮಾಜದಲ್ಲಿ ಸೇವಾ ಮನೋಭಾವವನ್ನು ಉತ್ತೇಜಿಸುವ ಕಾರ್ಯವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೆ ವೇಳೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಖಜಾಂಚಿ ಜಯೇಂದ್ರ ಕುಮಾರ್, ನಿರ್ದೇಶಕ ಗಿರೀಶ್, ಭೀಮ್ ರಾಜು, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಡಾ. ಜಿ. ಕಾವ್ಯ, ಅವಿನಾಶ್, ಕಟ್ಟಾಯ ಶಿವಕುಮಾರ್, ಐನೆಟ್ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.