ಕನ್ನಡಪ್ರಭ ವಾರ್ತೆ ಬೆಂಗಳೂರು
ಗಣತಿ ಕಾರ್ಯದ ಪೂರ್ವ ತಯಾರಿ ಹಾಗೂ ಸೂಕ್ತ ತರಬೇತಿ ನೀಡದ ಕಾರಣ ಗಣತಿ ಕಾರ್ಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸಿ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಜಿಬಿಎ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಹಾಗೂ ಸರ್ಕಾರದ ಸಚಿವಾಲಯ ಅಧಿಕಾರಿ, ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಜಂಟಿಯಾಗಿ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಕುಟುಂಬದ ಒಟ್ಟು ಸದಸ್ಯರ ಪೈಕಿ ಕುಟುಂಬದ ಮುಖ್ಯಸ್ಥ ಅಥವಾ ಲಭ್ಯವಿರುವ ಒಬ್ಬ ಸದಸ್ಯನ ಆಧಾರ್ ಕೆವೈಸಿಯಿಂದ ಮಾತ್ರ ಒಟಿಪಿ ಪಡೆಯುವಂತೆ ಸೂಚಿಸಬೇಕು. ವಾಸ್ತವ್ಯ ಸ್ಥಳದಿಂದ ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ 40-50 ಕಿ.ಮೀ. ದೂರದಲ್ಲಿ ಗಣತಿ ಕಾರ್ಯನಿರ್ವಹಿಸುತ್ತಿರುವವರನ್ನು ಕನಿಷ್ಠ 10 ಕಿ.ಮಿ. ವ್ಯಾಪ್ತಿಯಲ್ಲಿ ಗಣತಿ ಕಾರ್ಯಕ್ಕೆ ನಿಯೋಜಿಸಬೇಕು. ಮುಖ್ಯಮಂತ್ರಿಗಳು ಸೂಚಿಸಿದಂತೆ ದಿನಕ್ಕೆ 10-15 ಕುಟುಂಬಗಳ ಗಣತಿ ಮಾಡುವಂತೆ ನಿರ್ದೇಶನ ನೀಡಬೇಕು. ಮಾಹಿತಿ ನೀಡಲು ನಿರಾಕರಿಸುವ ಅಥವಾ ಲಭ್ಯವಿಲ್ಲದ ಕುಟುಂಬ/ಮನೆಗಳಿಗೆ ಗಣತಿದಾರರು ಒಂದು ಬಾರಿ ಪುನರ್ ಸಮೀಕ್ಷೆಗೆ ಅವಕಾಶ ಕಲ್ಪಿಸಬೇಕು ಹಾಗೂ ಲಭ್ಯವಿಲ್ಲದ, ನಿರಾಕರಿಸುವ ಕುಟುಂಬಗಳ ಗಣತಿ ಕಾರ್ಯದ ಗೌರವಧನವನ್ನು ಗಣತಿದಾರರಿಗೆ ನೀಡಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.ಬಹುಮಹಡಿ ಕಟ್ಟಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಗಣತಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಬೆಂಗಳೂರು ನಗರ ಜಿಲ್ಲೆಯ ನೌಕರರಿಗೆ ಸೆಪ್ಟೆಂಬರ್ ವೇತನ ಪಾವತಿಯಾಗದ ಕಾರಣ ಖಜಾನೆ ಇಲಾಖೆಯ ಅಧಿಕಾರಿ, ನೌಕರರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು. ಸಾರ್ವತ್ರಿಕ ರಜೆ ದಿನದಂದು ಗಣತಿ ಕಾರ್ಯ ನಿರ್ವಹಿಸುವುದನ್ನು ಕಡ್ಡಾಯಗೊಳಿಸಬಾರದು. ಗಣತಿಗಾಗಿ ಬಳಸುತ್ತಿರುವ ಮೊಬೈಲ್ ಆ್ಯಪ್‌ನಲ್ಲಿರುವ ತಾಂತ್ರಿಕ ಅಂಶಗಳನ್ನು ಬಗೆಹರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.