ಕನ್ನಡಪ್ರಭ ವಾರ್ತೆ ದಾವಣಗೆರೆ
ಲಿಂಗ ಆರಾಧನೆ ಬಸವಣ್ಣನವರು ಬರುವ ಪೂರ್ವದಲ್ಲಿಯೂ ಇತ್ತು. ಕಾಯಕ ಸಮುದಾಯದ ಜನರಲ್ಲಿ ಭಕ್ತಿ ಇದ್ದರೂ ದೇಗುಲ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಅದಕ್ಕಾಗಿ ಬಸವಣ್ಣನವರು ಪರ್ಯಾಯವಾಗಿ ಇಷ್ಟಲಿಂಗ ದೀಕ್ಷೆ ನೀಡಿ, ಪೂಜೆಯ ವಿಧಾನ ಹೇಳಿದರು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿಷಾದಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹರ ಸಾಹಿತ್ಯ ಸಂಕುಲದ ಆಶ್ರಯದಲ್ಲಿ ಹಿರಿಯ ಸಂಶೋಧಕ, ಲೇಖಕ ಡಾ.ಡಿ.ಎ.ಉಪಾಧ್ಯ ರಚಿಸಿದ ಬಸವಶೈವದಲ್ಲಿ ಹಿಂದುತ್ವ ಸಂಪುಟ-1 ಗ್ರಂಥ ಲೋಕಾರ್ಪಣೆ ಮಾಡಿ, ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರು ಬರುವ ಮುನ್ನವೂ ಲಿಂಗ ಇತ್ತು. ಅದಕ್ಕೆ ಸ್ಥಾವರ ಎನ್ನುತ್ತಾರೆ. ಬಸವಣ್ಣ ಭಕ್ತ ಭಂಡಾರಿಯೆಂದೇ ಗುರುತಿಸಲ್ಪಡುತ್ತಿದ್ದರು. ಈಗ ಭಕ್ತಿಯನ್ನು ಬಿಟ್ಟು, ಬರೀ ಬಸವಣ್ಣನವರನ್ನು ಮಾತ್ರವೇ ನೋಡಲಾಗುತ್ತಿದೆ ಎಂದು ವಿಷಾದಿಸಿದರು.ಲಿಂಗಾಯತರು ಹಿಂದೂಗಳಲ್ಲ ಎನ್ನುವವರು ಮೊದಲು ಶಿವಯೋಗ ಸಾಧನೆ ಮಾಡಿ, ನಿಮ್ಮ ಮನಸ್ಸು ಚಂಚಲವಾದ ಕಾರಣಕ್ಕೆ ಸಮಾಜದಲ್ಲಿ ಏನೇನೋ ಹೇಳುತ್ತಿದ್ದೀರಿ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಕೂಗೆಬ್ಬಿಸಿರುವ ಮಠಾಧೀಶರು, ಸಮಾಜದ ಮುಖಂಡರ ವಿರುದ್ಧ ಕಿಡಿಕಾರಿದರು.
ವಚನಗಳನ್ನು ತಮಗೆ ಬೇಕಾದಂತೆಲ್ಲಾ ತಿರುಚುತ್ತಿದ್ದಾರೆ, ಅವುಗಳಿಗೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನವನ್ನೂ ನೀಡಿ, ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಡೀ ವಿಶ್ವವೇ ಬಸವಣ್ಣನವರನ್ನು ಜಗಜ್ಯೋತಿಯೆಂದು ಮೆಚ್ಚಿದೆ. ಆದರೆ ಬಸವಣ್ಣನವ ಆಚಾರವನ್ನು ಆಚರಣೆ ಮಾತ್ರ ಮಾಡುತ್ತಿಲ್ಲ. ಬಸವಣ್ಣನವರನ್ನೂ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದು ತಪ್ಪು ಎಂದು ಆಕ್ಷೇಪಿಸಿದರು.ಇಡೀ ಜಗತ್ತನಲ್ಲಿ ಹೆಚ್ಚು ಕೃತಿ ರಚನೆಯಾದ ಯಾರಾದರೂ ಇದ್ದರೆ ಅದು ಬಸವಣ್ಣ ಮಾತ್ರ. ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ನಡೆಯುತ್ತಿರುವುದು ದುರಂತ. ಕರ್ಮ ಸಿದ್ಧಾಂತವನ್ನು ಬಸವಣ್ಣನವರು ಅಲ್ಲಗೆಳೆದರೆಂಬುದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ಒಂದು ವೇಳೆ ಎಲ್ಲಿಯಾದರೂ ಹೇಳಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಇಷ್ಟಲಿಂಗದಲ್ಲಿ ತಮ್ಮ ತಮ್ಮ ಇಷ್ಟ ದೇವರನ್ನು ಶರಣ-ಶರಣೆಯರು ಕಾಣ ತೊಡಗಿದರು. ಬಸವಾದಿ ಶರಣ-ಶರಣೆಯರು ರಚಿಸಿದ 190 ಕೋಟಿ ವಚನಗಳಿದ್ದವು. ಆದರೆ, ಕಲ್ಯಾಣ ಕ್ರಾಂತಿ ನಂತರ ಉಳಿದಿದ್ದು ಕೇವಲ 23 ಸಾವಿರ ವಚನಗಳು ಮಾತ್ರ. 13 ಸಾವಿರ ವಚನಗಳು ಮಾತ್ರ 12ನೇ ಶತಮಾನದ ಶರಣರವು ಎಂದು ವಿವರಿಸಿದರು.ಹಿರಿಯ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ಧಾರ್ಮಿಕ ಆಚರಣೆಗಳು ಯುವ ಜನರಿಗೆ ತಲುಪುತ್ತಿಲ್ಲ. ವೀರಶೈವ-ಲಿಂಗಾಯತ ಎರಡೂ ಒಂದೇ ಆಗಿದ್ದು, ಈ ಬಗ್ಗೆ ಯಾವುದೇ ಗೊಂದಲ ಬೇಡ. ಗುರು-ವಿರಕ್ತರು ಸಹ ಒಂದೇ ನಾಣ್ಯದ ಎರಡು ಮುಖಗಳು. ಇದೆಲ್ಲವೂ ಪ್ರಚಾರ ಆಗುತ್ತಿದೆಯೇ ಹೊರತು, ಆಚರಣೆಗೆ ಬರುತ್ತಿಲ್ಲ. ವೀರಶೈವ ಲಿಂಗಾಯತ ಸಮುದಾಯಲ್ಲಿ ಬೀಗತನ ಹೆಚ್ಚಾಗಬೇಕು ಎಂದರು.
ಕೃತಿ ರಚನೆಕಾರ, ಸಂಶೋಧಕ ಡಾ.ಡಿ.ಎ.ಉಪಾಧ್ಯ ಮಾತನಾಡಿ, ಸಿಂಧೂ ಬಯಲಿನಲ್ಲೇ ಲಿಂಗಾಯತ ಹುಟ್ಟಿಕೊಂಡಿದ್ದು, ಲಿಂಗ, ಲಿಂಗದ ಕಾಯಿ ಬಗ್ಗೆ ಮಾಹಿತಿ ಇದೆ. ಮಹಾಭಾರತದಲ್ಲಿ ಧರ್ಮರಾಜ-ಭೀಷ್ಮನ ಮಧ್ಯೆ ನಡೆಯುವ ಸಂಭಾಷಣೆಯಲ್ಲೂ ದಾನ ಪಡೆಯಲು ಬ್ರಾಹ್ಮಣರಂತೆ, ಲಿಂಗಾಯತರೂ ಅರ್ಹರು ಎಂಬ ಬಗ್ಗೆ ಉಲ್ಲೇಖ ಬರುತ್ತದೆ. ಬಸವಣ್ಣನವರ ಕಾಲದ ಪೂರ್ವದಲ್ಲೇ ಲಿಂಗಾಯತ ಧರ್ಮವಿತ್ತು. ಶರಣರ ಯುಗದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಆಗಿಲ್ಲ. ಅದಕ್ಕೂ ಮುಂಚೆಯೇ ಲಿಂಗಾಯತ ಇತ್ತು ಎಂದು ಸ್ಪಷ್ಟಪಡಿಸಿದರು.ಹರ ಸಾಹಿತ್ಯ ಸಂಕುಲದ ಅಧ್ಯಕ್ಷ ಎಸ್.ಸಿ.ಕಾಶೀನಾಥ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಬೋಧಕ ವಿ.ಚನ್ನಬಸಪ್ಪ ಕೃತಿ ಪರಿಚಯಿಸಿದರು. ಹಿರಿಯ ಉದ್ಯಮಿಗಳಾದ ವಾಣಿ ಶಿವಣ್ಣ, ಅಂದನೂರು ಮುರುಗೇಶ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಚಾಲಕ ವಿ.ಶಂಭುಲಿಂಗಪ್ಪ, ಸಂಕುಲದ ಉಪಾಧ್ಯಕ್ಷ ವಿನಾಯಕ ರಾನಡೆ, ಕೋಶಾಧ್ಯಕ್ಷ ಬಾದಾಮಿ ಚಂದ್ರಶೇಖರ, ಕಾ ರ್ಯದರ್ಶಿ ಬಾದಾಮಿ ಜಯಣ್ಣ, ಎಂ.ಬಿ.ನಟರಾಜ ಚಿತ್ರದುರ್ಗ, ಜಿ.ಷಣ್ಮುಖಪ್ಪ, ಓಂಕಾರಯ್ಯ ತವನಿಧಿ, ವಕೀಲ ಬಸವರಾಜ ಉಚ್ಚಂಗಿದುರ್ಗ, ಮಂಜುನಾಥ ಪುರವಂತರ ಕಕ್ಕರಗೊಳ್ಳ, ಅಂದನೂರು ಜಿ.ಷಣ್ಮುಖಪ್ಪ ಮಾಸ್ತರ್ ಇತರರು ಇದ್ದರು.
ಬಸವಾದಿ ಶರಣರ ವಚನಗಳಲ್ಲಿ ಸಂಸ್ಕೃತ ಶ್ಲೋಕ, ಆಗಮ, ವೇದಗಳ ಮೂಲಗಳಿವೆ. ಒಳ್ಳೆಯದನ್ನು ಸ್ವೀಕರಿಸುವ ಗುಣ ಶರಣರಲ್ಲಿತ್ತು. ರನ್ನನು ಪಂಪನನ್ನು ಅನುಕರಣ ಮಾಡಿದ್ದ. ಒಳ್ಳೆಯ ವಿಚಾರ ಎಲ್ಲಿಂದ, ಯಾರಿಂದ ಬಂದರೇನು, ಒಳ್ಳೆಯದನ್ನು ಸ್ವೀಕರಿಸಬೇಕು. ಜಗತ್ತಿನ ಶ್ರೇಷ್ಟ ಚಳವಳಿ 12ನೇ ಶತಮಾನದ ಶರಣರ ಚಳವಳಿ, ವಚನ ಸಾಹಿತ್ಯ ಚಳವಳಿಯಾಗಿದೆ.ಡಾ.ಡಿ.ಎ.ಉಪಾಧ್ಯಕ್ಷ, ಸಂಶೋಧಕ, ಹಿರಿಯ ಲೇಖಕ