ವೈಚಾರಿಕ ಬರಹದಿಂದ ದಿಟ್ಟತನ ತೋರಿದ್ದ ಲಿಂಗಣ್ಣ ಸತ್ಯಂಪೇಟೆ: ಕಾಂತಾ

KannadaprabhaNewsNetwork |  
Published : Jul 27, 2026, 01:30 AM IST
ಫೋಟೋ- ಲಿಂಗಣ | Kannada Prabha

ಸಾರಾಂಶ

ಶಾಲಾ ಶಿಕ್ಷಕರಾಗಿ, ಪತ್ರಕರ್ತರಾಗಿ ದಿಟ್ಟತನದಿಂದ ರಾಜಕಾರಣಿಗಳ ಅಕ್ರಮಗಳು, ರೈತರ ಬವಣೆಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ದಿ.ಲಿಂಗಣ್ಣ ಸತ್ಯಂಪೇಟೆ ಅವರಿಗೆ ಸಾಕಷ್ಟು ಕಿರುಕುಳ ನೀಡಿದರೂ ವಿಚಲಿತರಾಗಿರಲಿಲ್ಲ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಾಲಾ ಶಿಕ್ಷಕರಾಗಿ, ಪತ್ರಕರ್ತರಾಗಿ ದಿಟ್ಟತನದಿಂದ ರಾಜಕಾರಣಿಗಳ ಅಕ್ರಮಗಳು, ರೈತರ ಬವಣೆಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ದಿ.ಲಿಂಗಣ್ಣ ಸತ್ಯಂಪೇಟೆ ಅವರಿಗೆ ಸಾಕಷ್ಟು ಕಿರುಕುಳ ನೀಡಿದರೂ ವಿಚಲಿತರಾಗಿರಲಿಲ್ಲ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಶರಣಮಾರ್ಗ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆಯವರ 14ನೇ ಸಂಸ್ಮರಣೆ, ಬಸವಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ‘ಅಪ್ಪನ ಒಡನಾಟ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲಾ ಶಿಕ್ಷಕರಾಗಿದ್ದ ಅವರು ನಿರ್ಭೀತಿಯಿಂದ ವೈಚಾರಿಕತೆ ಹಾಗೂ ಪ್ರಖರ ಬರವಣಿಗೆಯಿಂದಾಗಿ ಹಲವು ಬಾರಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. ಸೇವೆಯಿಂದ ಅಮಾನತುಗೊಂಡಿದ್ದರು. ಅಂತಹ ಸಂದರ್ಭದಲ್ಲಿ ಅವರ ವರ್ಗಾವಣೆ, ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಮಾಡಿದ್ದೆ ಎಂದು ಹೇಳಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಬಸವ ತತ್ವ ಅನುಯಾಯಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರು ಈ ಭಾಗದ ರಾಜಕಾರಣಿಗಳು, ಮಠಾಧೀಶರ ಅಕ್ರಮಗಳನ್ನು ನಿರ್ಭಿಡೆಯಿಂದ ಬಯಲುಗೊಳಿಸುತ್ತಿದ್ದರು ಎಂದರು.

ತಂದೆಯವರ ಬಗ್ಗೆ ಮಾತನಾಡಿದ ಪುತ್ರ ವಿಶ್ವರಾಧ್ಯ ಸತ್ಯಂಪೇಟೆ, ಬಸವ ಮಾರ್ಗ ಪತ್ರಿಕೆ ಒಂದು ಕಾಲಕ್ಕೆ 25 ಸಾವಿರ ಪ್ರತಿ ಮಾರಾಟವಾಗುತ್ತಿತ್ತು. ಚಂದಾ ಕೊಡಲಿ, ಬಿಡಲಿ ಯಾರಾದರೂ ಪರಿಚಯವಾದರೆ ಸಾಕು ಅವರ ಮನೆಗೆ ಪತ್ರಿಕೆ ಕಳಿಸುತ್ತಿದ್ದರೆಂದು ನೆನಪಿಸಿಕೊಂಡರು.

ಸಾನ್ನಿಧ್ಯ ವಹಿಸಿದ್ದ ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿ, ‘ಲಿಂಗಣ್ಣ ಅವರು ಇಳಕಲ್‌ ಮಹಾಂತ ಅಪ್ಪಗಳ ಅನುಯಾಯಿಯಾಗಿದ್ದರು, ಲಿಂಗಣ್ಣ ಅವರು ನಿಜವಾದ ಶರಣರೆಂದರು. ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ.‌ಬಿ.ಎಸ್.ಸುಧಾಕರ್ ಅವರಿಗೆ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಸತ್ಯಂಪೇಟೆ ಅವರು ಬರೆದ ಅಪ್ಪನ ಒಡನಾಟ ಕೃತಿ, ಶರಣ ಮಾರ್ಗ ವಿಶೇಷ ಸಂಚಿಕೆಯನ್ನು ಶಾಸಕ ಬಿ.ಆರ್.ಪಾಟೀಲ ಬಿಡುಗಡೆಗೊಳಿಸಿದರು. ಅಶೋಕ ದೊಡ್ಡಮನಿ ಕೃತಿ ಪರಿಚಯ ಮಾಡಿದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಇದ್ದರು. ಸುರೇಶ ಬಡಿಗೇರ ನಿರೂಪಿಸಿದರು. ವಿಠ್ಠಲ್ ಚಿಕಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡದಾಳವಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯ: ಸಂಸದ