ಹುಡಾ ಶಾಪ ವಿಮೋಚನೆ ಮಾಡಿದ ಲಿಂಗರಾಜ ಪಾಟೀಲ!

KannadaprabhaNewsNetwork |  
Published : Jun 19, 2026, 02:15 AM IST
ಲಿಂಗರಾಜ ಪಾಟೀಲ | Kannada Prabha

ಸಾರಾಂಶ

ಹುಡಾ (ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷಗಿರಿ ಅತ್ಯಂತ ಪ್ರಭಾವಿ ಹುದ್ದೆ. ಆದರೆ, ಇದರ ಅಧ್ಯಕ್ಷರಾದರೆ ಮುಂದೆ ರಾಜಕೀಯವಾಗಿ ಬೆಳೆಯುವುದಿಲ್ಲ. ಯಾವುದೇ ಸ್ಥಾನಮಾನ ಸಿಗುವುದಿಲ್ಲ. ರಾಜಕೀಯವಾಗಿ ನೈಪಥ್ಯಕ್ಕೆ ಸರಿಯುತ್ತಾರೆ ಎಂಬ ಮಾತಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಹುಡಾ ಮಾಜಿ ಅಧ್ಯಕ್ಷ, ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಚುನಾಯಿತರಾಗಿದ್ದಾರೆ. ಈ ಮೂಲಕ ಹುಡಾ ಅಧ್ಯಕ್ಷರಾದವರು ರಾಜಕೀಯ ನೈಪಥ್ಯಕ್ಕೆ ಸರಿಯುತ್ತಾರೆ ಎಂಬ ಶಾಪವು ವಿಮೋಚನೆ ಆಗಿದೆ.

ಹುಡಾ (ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷಗಿರಿ ಅತ್ಯಂತ ಪ್ರಭಾವಿ ಹುದ್ದೆ. ಆದರೆ, ಇದರ ಅಧ್ಯಕ್ಷರಾದರೆ ಮುಂದೆ ರಾಜಕೀಯವಾಗಿ ಬೆಳೆಯುವುದಿಲ್ಲ. ಯಾವುದೇ ಸ್ಥಾನಮಾನ ಸಿಗುವುದಿಲ್ಲ. ರಾಜಕೀಯವಾಗಿ ನೈಪಥ್ಯಕ್ಕೆ ಸರಿಯುತ್ತಾರೆ ಎಂಬ ಮಾತಿತ್ತು. ಇದು ಶಾಪ ಎಂದೇ ಹೇಳಲಾಗುತ್ತಿತ್ತು. ಕಾಕತಾಳಿಯೆಂಬಂತೆ ಈ ವರೆಗೆ ಹುಡಾ ಅಧ್ಯಕ್ಷರಾದವರ ಪರಿಸ್ಥಿತಿ ಅದೇ ರೀತಿಯಾಗಿತ್ತು. 1988ರಲ್ಲಿ ಹುಡಾ ರಚನೆಯಾದ ಬಳಿಕ ಈ ವರೆಗೆ 11ಜನ ಅಧ್ಯಕ್ಷಗಿರಿ ಅನುಭವಿಸಿದ್ದರೆ 12ನೇ ವ್ಯಕ್ತಿಯಾಗಿ ಶಾಕೀರ್‌ ಸನದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯಾರ್‍ಯಾರು?:

ಪಿ.ಎಸ್‌. ಶೂರ್ಪಾಲಿ (1992), ರಾಜಾ ದೇಸಾಯಿ (1993-94, 2003-2005), ಕಾಡಯ್ಯ ಹಿರೇಮಠ (1996-97), ಬಾಳು ಮಗಜಿಕೊಂಡಿ (1997-99), ಸಿ.ಎಸ್‌. ಶಾಸ್ತ್ರಿಮಠ (1999- ಒಂದೇ ತಿಂಗಳು), ಬಿ.ಎಸ್‌. ಪಾಟೀಲ (2000- 03), ಲಿಂಗರಾಜ ಪಾಟೀಲ (2007, 2012-13), ದತ್ತಾ ಡೋರ್ಲೆ (2009-12), ದಾನಪ್ಪ ಕಬ್ಬೇರ (2015-16), ಅನ್ವರ ಮುಧೋಳ (2016-18), ನಾಗೇಶ ಕಲಬುರ್ಗಿ (2020-2022) ಅಧ್ಯಕ್ಷರಾಗಿದ್ದರೆ, ಶಾಕೀರ ಸನದಿ 2024ರಿಂದ ಇದ್ದಾರೆ.

ಇವರಲ್ಲಿ ಆಗ ಅತ್ಯಂತ ಪ್ರಭಾವಿಯಾಗಿದ್ದ ಕಾಡಯ್ಯ ಹಿರೇಮಠ ಮಾಜಿ ಸಿಎಂ ಎಸ್‌.ಆರ್‌. ಬೊಮ್ಮಾಯಿಗೆ, ರಾಜಾ ದೇಸಾಯಿ ಮಾಜಿ ಸಿಎಂ ವೀರೇಂದ್ರ ಪಾಟೀಲಗರಿಗೆ ಹಾಗೂ ದಾನಪ್ಪ ಕಬ್ಬೇರ್‌ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅತ್ಯಾಪ್ತರಾಗಿದ್ದರು. ಹೀಗೆ ಪ್ರತಿಯೊಬ್ಬರು ಆಯಾ ಪಕ್ಷದಲ್ಲಿ ಅತ್ಯಂತ ಪ್ರಭಾವಿಗಳೇ ಎಂದೆನಿಸಿಕೊಂಡಿದ್ದರು. ಆದರೆ, ಅದೇನು ಶಾಪವೋ, ಕಾಕತಾಳೀಯವೋ ಹುಡಾ ಅಧ್ಯಕ್ಷಗಿರಿ ಮುಗಿದ ಇವರಿಗೆ ಇವರ ಶ್ರಮಕ್ಕೆ ತಕ್ಕಂತಹ ಸ್ಥಾನಮಾನ ಸಿಗಲಿಲ್ಲ ಎಂಬುದು ಅಷ್ಟೇ ಸತ್ಯ.

ಈ ನಡುವೆ ಲಿಂಗರಾಜ ಪಾಟೀಲ 2007 ಹಾಗೂ 2013ರಲ್ಲಿ ಎರಡು ಬಾರಿ ಹುಡಾ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಪ್ರತಿ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಇವರ ಹೆಸರು ಕೇಳಿ ಬರುತ್ತಿತ್ತು. ಒಂದು ಬಾರಿ ರಾಜ್ಯಸಭೆಗೆ ಇನ್ನೇನು ಆಯ್ಕೆಯೇ ಆದರು ಎಂಬಂತಿತ್ತು. ಆದರೆ, ಕೊನೆ ಕ್ಷಣದಲ್ಲಿ ಇವರ ಹೆಸರು ಕೈಬಿಡಲಾಗಿತ್ತು. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗುವುದು ಕೂಡ ಸ್ವಲ್ಪದರಲ್ಲೇ ಕೈತಪ್ಪಿತ್ತು. ಆಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಹುಡಾ ಅಧ್ಯಕ್ಷರಾದರೆ ಮುಂದೆ ರಾಜಕೀಯವಾಗಿ ಬೆಳೆಯುವುದಿಲ್ಲ ಎಂಬ ಮಾತು ಸಹ ಇತ್ತು.

ಇದೀಗ ಹುಸಿಯಾಯ್ತು?:

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರ ಪೈಕಿ ಒಬ್ಬರಾದ, ಈದ್ಗಾ ಮೈದಾನ ರಾಷ್ಟ್ರಧ್ವಜ ಹಾರಾಟದ ಹೋರಾಟಗಾರ ಲಿಂಗರಾಜ ಪಾಟೀಲ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಚಿಂತಕರ ಛಾವಡಿ ಪ್ರವೇಶಿಸಿದ್ದಾರೆ. ಜತೆ-ಜತೆಗೆ ಹುಡಾ ಅಧ್ಯಕ್ಷರಾಗಿರುವವರಿಗೂ ಸ್ಥಾನಮಾನ ಸಿಗಲ್ಲ ಎಂಬ ಮಾತು ಹುಸಿ ಮಾಡಿದ್ದಾರೆ.

ಇದು ಮುಂಬರುವ ಲೋಕಸಭೆ ಅಥವಾ ವಿಧಾನಸಭೆ ಮೇಲೆ ಕಣ್ಣೀಟ್ಟಿರುವ, ಇದೀಗ ಹುಡಾ ಅಧ್ಯಕ್ಷರಾಗಿರುವ ಶಾಕೀರ ಸನದಿ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಚ್ಚರ ವಹಿಸಿ
ಶರಣ ಸಾಹಿತ್ಯಕ್ಕೆ ಡಾ.ಸಿದ್ದಯ್ಯ ಪುರಾಣಿಕರ ದೊಡ್ಡ ಕೊಡುಗೆ ಅಪಾರ