ಲಿಂಗಾಯತ, ವೀರಶೈವ ಬೇರೆ ಅಲ್ಲ ಒಂದೇ..!

KannadaprabhaNewsNetwork | Updated : Feb 05 2024, 04:50 PM IST

ಸಾರಾಂಶ

ಬಸವಣ್ಣನವರು ತಮ್ಮ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದು ಬಸವಣ್ಣನವರು ಶ್ರೇಷ್ಠ ದಾರ್ಶನಿಕರಾದರು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಧಾರವಾಡ: ಲಿಂಗಾಯತ ಮತ್ತು ವೀರಶೈವ ಎಂಬ ಬೇರೆ ಬೇರೆ ಅಂತ ತಿಳಿಯಬಾರದು. ಎರಡು ಒಂದೇ ಆಗಿವೆ. ಧರ್ಮ ಮತ್ತು ಸಂಸ್ಕ್ರತಿ ಉಳಿಯಬೇಕಾದರೆ ಎಲ್ಲರೂ ಕೂಡಿ ಸಾಗಬೇಕು ಎಂದು ಮುಂಡರಗಿ ಸಂಸ್ಥಾನ ಮಠದ ಡಾ. ಅನ್ನದಾನೀಶ್ವರ ಸ್ವಾಮಿಜಿ ಹೇಳಿದರು.

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ವಿವಿಧ ಸಂಸ್ಥೆಗಳ ಜೊತೆಗೂಡಿ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಆಯೋಜಿಸಿದ‘ವಚನಾಮೃತ -125’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಾಮೃತ ಕಾರ್ಯಕ್ರಮದ ಸಾರವನ್ನು ಜನರು ಅರ್ಥಮಾಡಿಕೊಳ್ಳಬೇಕು. ಬಸವಣ್ಣನವರು ತಮ್ಮ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದು ಬಸವಣ್ಣನವರು ಶ್ರೇಷ್ಠ ದಾರ್ಶನಿಕರಾದರು ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಸವಣ್ಣನವರು ಎಲ್ಲ ಸಮುದಾಯದ ಶರಣರನ್ನು, ದಾರ್ಶನಿಕರನ್ನು ಒಗ್ಗೂಡಿಸಿ ಸಮ ಸಮಾಜ ಮತ್ತು ಸಮಾನತೆ ಮೂಡಿಸುವಲ್ಲಿ ಕಾರಣರಾದರು. 

ಪ್ರಸ್ತುತ ಶೂನ್ಯ ಸಂಪಾದನೆಯ ಮಹತ್ವವನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಯಬೇಕಾಗಿದೆ. ಸಮಾಜದ ಸಾಮಾನ್ಯರಿಗೂ ಬಸವಣ್ಣನವರ ವಚನ ಸಾರದ ಮಹತ್ವ ತಿಳಿಯಬೇಕು. ಈ ಕುರಿತು ವಚನಸಾಹಿತ್ಯದ ಪ್ರಚಾರ ಕಾರ್ಯ ನಡೆಯಬೇಕಾಗಿದೆ ಎಂದರು.

ಕೊಪ್ಪಳದ ಕನಕಗಿರಿ ಮಠದ ಚೆನ್ನಮಲ್ಲ ಸ್ವಾಮೀಜಿ, ಶರಣರ ತತ್ವ ವಚನಗಳು ಜೀವನದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿವೆ. ಮನುಷ್ಯ ಜೀವನ ಹೇಗೆ ನಡೆಸಬೇಕು ಎಂಬುದು ವಚನಗಳಲ್ಲಿ ಇವೆ. 

ಇಂದು ವಚನಗಳ ಮುಖ್ಯ ಸಾರವನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ವಚನಗಳನ್ನು ಕೇವಲ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.

ಆಕಾಶವಾಣಿ ಮುಖ್ಯಸ್ಥರಾದ ಡಾ. ಬಸು ಬೇವಿನಗೀಡದ, ಹುಬ್ಬಳ್ಳಿಯ ಗುರುಬಸವ ಟ್ರಸ್ಟ್‌ನ ಅಧ್ಯಕ್ಷರಾದ ಶಶಿಧರ ಕರವೀರಶೇಟ್ಟರ, ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ. ಕುಂದಗೋಳ ಮಾತನಾಡಿ, ದಾಸೋಹ ಸಂಸ್ಕೃತಿಯನ್ನು ಇಂದಿಗೂ ಕವಿವಿ ಮುಂದುವರಿಸಿಕೊಂಡು ಹೋಗುತ್ತಿದೆ. 

ಪ್ರಸ್ತುತ 125 ಕಂತುಗಳಲ್ಲಿ ಆಕಾಶವಾಣಿಯ ಮೂಲಕ ವಚನಾಮೃತ ಕಾರ್ಯಕ್ರಮ ಪ್ರಸಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಬಸವಣ್ಣನವರು ವೈಜ್ಞಾನಿಕವಾಗಿ ವಚನಗಳನ್ನು ನೀಡಿದ್ದಾರೆ. ಶರಣರು ತಮ್ಮ ವಚನಗಳ ಮೂಲಕ ಮೌಢ್ಯಗಳನ್ನು ನಿವಾರಿಸಲು ಕಾರಣರಾದರು. 

ವಚನ ಸಾಹಿತ್ಯವನ್ನು ಜನರ ಮನೆ ಮನೆಗೆ ತಲುಪಿಸುವ ಕಾರ್ಯ ಕವಿವಿ ಬಸವೇಶ್ವರ ಪೀಠ ಮಾಡುತ್ತಿದೆ ಎಂದರು.

ಡಾ. ಬಾಲಚಂದ್ರ ನಾಕೋಡ ಮತ್ತು ಆಕಾಶವಾಣಿಯ ಸದಾಶಿವ ಐಹೊಳೆ ವಚನ ಸಂಗೀತ ನಡೆಸಿಕೊಟ್ಟರು. ಕವಿವಿ ಕುಲಸಚಿವರಾದ ಡಾ. ಎ. ಚೆನ್ನಪ್ಪ, ಶಂಕರ ಕುಂಬಿ, ಶೈಲಜಾ ರಾಜಕುಮಾರ, ಸಿದ್ದಲಿಂಗಯ್ಯ ವಾಲಿ, ಸಿದ್ದರಾಮ ನಡಕಟ್ಟಿ, ಪ್ರೊ. ಜೆ.ಬಿ.ಹಳ್ಯಾಳ, ಈರಣ್ಣ ಇಂಜನಗೇರಿ ಇದ್ದರು.

Share this article