ಹಾನಗಲ್ಲ: ಸಮಾಜದ ಮೇಲಿನ ಕಳಕಳಿಯ ಸೆಲೆ ಬತ್ತದಂತೆ, ತಮ್ಮನ್ನು ಲೋಕ ಕಲ್ಯಾಣಕ್ಕೆ ಮೀಸಲಿಟ್ಟು, ಹಸನಾದ ಸಮಾಜದ ಕನಸು ಕಂಡು ನನಸಿಗೆ ಹಾತೊರೆದ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಚಿಂತನೆ ಮಾನವನ ಇರುವಿನವರೆಗೂ ಜಾಗೃತವಾಗಿರುವಂತಹದ್ದು ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮಿಗಳು ತಿಳಿಸಿದರು.ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ೯೫ನೇ ಪುಣ್ಯ ಸ್ಮರಣೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಲಿಂಗಾಯತ ಜಾತಿ ಅಲ್ಲ. ಅದೊಂದು ಶುದ್ಧ ಆಚರಣೆ. ಅದೊಂದು ಆಚಾರ. ಧರ್ಮ ಉಳಿಯಲು ಆಚರಣೆ ಬೇಕು. ಪರೋಪಕಾರದಲ್ಲಿ ಸುಖ ಕಂಡ ಶ್ರೀಗಳು ಸಮಾಜಕ್ಕಾಗಿಯೇ ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಧಾರೆ ಎರೆದರು. ಯೋಗಿಗಳ ಜೀವನ ಗಾಥೆ ಅರಿಯಬೇಕು. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಮನುಷ್ಯ ಮಹಾ ಮಾನವನಾಗುವ ಶಕ್ತಿ ಸಂದೇಶವನ್ನು ನೀಡುತ್ತದೆ. ಉತ್ತಮ ಧ್ಯೇಯ ಹಾಗೂ ಅದಕ್ಕಾಗಿ ಹಾತೊರೆದು ಶ್ರಮ ವಹಿಸಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಹಾನಗಲ್ಲ ಶ್ರೀಗಳೇ ಸಾಕ್ಷಿ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಬದುಕು ನಮ್ಮ ಕೈಯಲ್ಲಿದೆ. ಆಸೆ, ಆಮಿಷ, ವ್ಯಾಮೋಹ ತೊರೆದವನೇ ವಿರಕ್ತ. ಜನರ ನಡುವಿದ್ದು ಸಾಮಾಜಿಕ ಸೇವೆ ಸಲ್ಲಿಸಿ ಗೆದ್ದವನೇ ಮಹಾತ್ಮ. ಆತ್ಮಸಾಕ್ಷಿ ಒಪ್ಪಿ ಬದುಕಬೇಕು. ವಿಕಾಸದ ಬದುಕು ನಮ್ಮದಾಗಬೇಕು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದೇ ಶಿವಯೋಗಿಗಳು ಹಾಗೂ ಮಹಾತ್ಮರ ಗುಣ ಎಂದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಹೊಸಪೇಟೆಯ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಮಾತನಾಡಿ, ಮೊದಲು ನಮಗೆ ಹಸನಾದ ಹೃದಯವಿರಲಿ. ದೈವಿಕ ಚಿಂತನೆ ಮೊಳಕೆಯೊಡೆಯಲಿ. ಮನುಷ್ಯನಿಗೆ ಏಕಾಂತ ಬಹುಮುಖ್ಯ. ಅದಕ್ಕಾಗಿ ಧ್ಯಾನ ಲಿಂಗಪೂಜೆಯಂತಹ ಕ್ರಮಗಳು ಬೇಕು ಎಂದರು.ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮಿಗಳು, ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಹಾವೇರಿ ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಮಾಜಿ ಶಾಸಕ ಶಿವರಾಜ ಸಜ್ಜನರ ಅತಿಥಿಗಳಾಗಿದ್ದರು.ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ರಾಘವೇಂದ್ರ ಮಾಡಳ್ಳಿ, ಡಾ. ಜಿ.ಟಿ. ಜಿತೇಂದ್ರ ಅವರನ್ನು ಶ್ರೀಗಳು ಗೌರವಿಸಿದರು. ಡಾ. ವೆಂಕಟೇಶ ಗವಾಯಿ ಪೂಜಾರ, ಶಿವಬಸಯ್ಯ ಗಡ್ಡದಮಠ, ಅನನ್ಯ ಹೆಬ್ಬಾರ, ಜಗದೀಶ ಮಡಿವಾಳರ ಸಂಗಡಿಗರು ವಚನಗಳನ್ನು ಹಾಡಿದರು. ವಿ.ಎಸ್. ಆಶಾ, ಪವಿತ್ರಾ ಹೀರೂರ ಸಂಗಡಿಗರು, ನಾಗಲಕ್ಷ್ಮಿ ಸಂಗಡಿಗರು ವಚನ ನೃತ್ಯ ಪ್ರದರ್ಶಿಸಿದರು. ಡಾ. ವಿಶ್ವನಾಥ ಬೋಂದಾಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.