ಹೂವಿನಹಡಗಲಿ: ನಾಡಿನ ವೀರಶೈವ ಲಿಂಗಾಯತ ಮಠಗಳು ಅನ್ನ, ಅಕ್ಷರ, ಆಶ್ರಯವನ್ನು ಜಾತಿ, ಮತಭೇದ ಮರೆತು ಎಲ್ಲ ಸಮುದಾಯದವರಿಗೆ ನೀಡಿ ಸಮಾಜದ ಬೆಳವಣಿಗೆಗೆ ಬಹು ದೊಡ್ಡ ಕೊಡುಗೆ ನೀಡಿವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಸಿ.ವಿ. ಚಂದ್ರಶೇಖರ, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದಂತೆ ನಡೆದು ಆದರ್ಶವಾಗಿದ್ದಾರೆ. ಜಾತ್ರೆಯನ್ನು ಬರೀ ಆಚರಣೆಗೆ ಮಾತ್ರ ಸೀಮಿತಗೊಳಿಸದೇ ವಿಶೇಷ ಅರ್ಥ ತಂದು ಕೊಟ್ಟಿದ್ದಾರೆ. ಶರಣರು, ಸಂತರು, ಮಹಾಂತರ ಸಂದೇಶಗಳನ್ನು ಉಪದೇಶಿಸಿ, ನೆಮ್ಮದಿಯ ಬದುಕಿಗೆ ದಾರಿದೀಪವಾಗಿದ್ದಾರೆ. ಇಲ್ಲಿನ ಹಿರಿಶಾಂತವೀರ ಸ್ವಾಮೀಜಿ ಅವರ ಮಾದರಿಯಲ್ಲೇ ಮಠ ಕಟ್ಟುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂ.ಲಿಂಗೇಶ್ವರ ಸ್ವಾಮೀಜಿ ಶಾಖಾ ಮಠಕ್ಕೆ ಉತ್ತಮ ಬುನಾದಿ ಹಾಕಿದ್ದಾರೆ. ಅವರ ಆಶಯದಂತೆ ಮಠವನ್ನು ಜೀರ್ಣೋದ್ದಾರ ಮಾಡುತ್ತಿರುವ ಡಾ.ಹಿರಿಶಾಂತವೀರ ಸ್ವಾಮೀಜಿ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ್ದಾರೆ ಎಂದರು.ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಹಿರಿಶಾಂತವೀರ ಸ್ವಾಮೀಜಿ, ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ, ಹೊಳಲಿನ ಚನ್ನಬಸವ ದೇವರು, ಚೌಕಿಮಠದ ಗಾಡಿತಾತ ಸಾನ್ನಿಧ್ಯ ವಹಿಸಿದ್ದರು. ಭಕ್ತಿಸೇವೆ ಸಲ್ಲಿಸಿದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು. ಗವಿಶ್ರೀ ಅಕ್ಕನ ಬಳಗದವರು ಜೋಕುಮಾರಸ್ವಾಮಿ ಕಿರುನಾಟಕ ಪ್ರದರ್ಶಿಸಿದರು.