ಪಹಣಿಗೆ ಆಧಾರ್ ಸಂಖ್ಯೆ ಜೋಡಿಸಿ

KannadaprabhaNewsNetwork |  
Published : Feb 25, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಟಿಂಟ್ ಬಾಟಂ | Kannada Prabha

ಸಾರಾಂಶ

ಜಿಲ್ಲೆಯ ರೈತ ಸಮುದಾಯಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯಾದ್ಯಂತ ಸ್ವಯಂ ಚಾಲಿತ ಮ್ಯುಟೇಷನ್ ವ್ಯವಸ್ಥೆಯನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದು, ರೈತ ಸಮುದಾಯ ತಮ್ಮ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

ಈ ಹಿಂದೆ ಎಲ್ಲಾ 7 ದಿನಗಳ ಹಾಗೂ 15 ದಿನಗಳ ನೋಟೀಸು ಅವಧಿ ಹೊಂದಿರುವ ಮ್ಯುಟೇಶನ್‌ಗಳನ್ನು ನೋಟೀಸ್‌ ಅವಧಿಯು ಮುಕ್ತಾಯದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುವ ಅವಶ್ಯಕತೆ ಇತ್ತು. ಇದರಿಂದಾಗಿ ಮ್ಯುಟೇಶನ್ ಅನುಮೋದನೆಗೆ ಹೆಚ್ಚಿನ ಸಮಯ ತಗಲುತ್ತಿತ್ತು. ಅನಗತ್ಯ ವಿಳಂಬವನ್ನು ತಪ್ಪಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದಲ್ಲಿ ಸ್ವಯಂ ಚಾಲಿನ ಮ್ಯುಟೇಷನ್‍ಗೆ ಹೊಸ ಪದ್ಧತಿಯನ್ನು ಫೆ. 24 ರಿಂದ ಜಾರಿಗೆ ತರಲಾಗಿದೆ. ಎಲ್ಲಾ 7 ದಿನಗಳ ಹಾಗೂ 15 ದಿನಗಳ ನೋಟೀಸು ಅವಧಿ ಹೊಂದಿರುವ ಮ್ಯುಟೇಷನ್‍ಗಳನ್ನು ನೋಟೀಸು ಅವಧಿಯು ಮುಕ್ತಾಯವಾದ ನಂತರ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದಿದ್ದಾರೆ.

7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟೀಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು ಅಥವಾ ಸಾರ್ವಜನಿಕರ ಯಾವುದೇ ತಕರಾರು ನೀಡಿದ್ದಲ್ಲಿ, ಈ ಮ್ಯುಟೇಷನ್ ಅನ್ನು ಪೂರ್ಣಗೊಳಿಸದ ಆರ್ ಸಿಸಿಎಂಎಸ್ ತಂತ್ರಾಂಶದ ತಹಶೀಲ್ದಾರರ ನ್ಯಾಯಾಲಯಕ್ಕೆ ಅಂತಹ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಈ ಹಿಂದೆ ಮ್ಯುಟೇಷನ್ ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ ರಾಜಸ್ವ ನಿರೀಕ್ಷಕರು ತಾಲೂಕು ಕಛೇರಿಗಳಿಗೆ ಬಂದು ಸಲ್ಲಿಸಬೇಕಾಗಿತ್ತು. ಆದರೆ ಪ್ರಸ್ತುತ, ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಲಾಗಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ ಹಾಗೂ ಅನುಮೋದನೆಯಾಗುತ್ತದೆ.

ಭೂಮಿ ತಂತ್ರಾಂಶದಲ್ಲಿ ಸರ್ಕಾರಿ ಜಮೀನುಗಳು, ಸರ್ಕಾರಿ ನಿಬಂಧನೆ ಇರುವ ಜಮೀನುಗಳು ಹಾಗೂ ಪಿಟಿಸಿಎಲ್ ವ್ಯಾಪ್ತಿಗೆ ಬರುವ ಜಮೀನುಗಳನ್ನು ಫ್ಲಾಗ್ ಮಾಡಲಾಗಿದ್ದು, ಅಂತಹ ಜಮೀನುಗಳನ್ನು ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ಜಮೀನುಗಳು ಸ್ವಯಂಚಾಲಿತ ಮ್ಯುಟೇಷನ್ ವ್ಯಾಪ್ತಿಗೆ ಬರುವುದಿಲ್ಲ.

ಮ್ಯುಟೇಷನ್ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ ಎಸ್ಎಂ ಎಸ್ ಸಂದೇಶ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ ಮತ್ತು ಸಂಬಂಧಿಸಿದ ನೋಟೀಸುಗಳನ್ನು ಇ-ಚಾವಡಿ ಮೂಲಕ ತಂತ್ರಾಂಶದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳು ಜನರನ್ನು ದುರುಪಯೋಗಪಡಿಸಿಕೊಳ್ಳದಂತೆ, ನೆಮ್ಮದಿಯಿಂದ ಬದುಕಲು ಆಗುತ್ತದೆ. ಜನರಿಗೆ ಅನಗತ್ಯ ಹೊರೆ ಕಡಿಮೆ ಮಾಡಿ, ಸರ್ಕಾರಿ ಸೇವೆಗಳ ಸರಳೀಕರಣ ಮತ್ತು ಸುಲಲಿತವಾಗಿ ಜನರ ಮನೆಬಾಗಿಲಿಗೆ ಸೇವೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ರಾಜಸ್ವ ನಿರೀಕ್ಷಕರುಗಳಿಗೆ ಕ್ರೋಮ್‍ಬುಕ್‍ನ್ನು ಏಪ್ರಿಲ್‍ನಿಂದ ನೀಡಲು ವ್ಯವಸ್ಥೆ ಮಾಡಲಾಗುತ್ತಿದ್ದು ಇನ್ನು ಮುಂದೆ ಕಂದಾಯ ಇಲಾಖೆಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಆಗ್ರಹ
27ಕ್ಕೆ ಬಸವತತ್ವ ಪೀಠದ ಸುವರ್ಣ ಮಹೋತ್ಸವ