ಕನ್ನಡಪ್ರಭ ವಾರ್ತೆ ಧಾರವಾಡ ಜನವರಿ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ ಮಾಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ವೀಕ್ಷಕರು ಸಭೆಗಳನ್ನು ಮಾಡುತ್ತಿದ್ದಾರೆ ಎಂದರು. ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರನ್ನು ಮಾತನಾಡಿಸಿದ್ದಾರೆ. ಇವರನ್ನೆಲ್ಲ ಮಾತನಾಡಿಸಿ ಒಂದು ಪ್ಯಾನಲ್ ಮಾಡುತ್ತಾರೆ. ಹತ್ತು ದಿನಗಳಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದರು. ಎಲ್ಲ ವೀಕ್ಷಕರು, ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆ ಸಭೆ ನಡೆಸುತ್ತಾರೆ. ಸಭೆ ಬಳಿಕ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರು, ಸಿಎಂ ಹಾಗೂ ವರಿಷ್ಠರಿಗೆ ಕಳುಹಿಸುತ್ತಾರೆ ಎಂದರು. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ವರಿಷ್ಠರು ಮತ್ತೊಂದು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತ್ಯಗೊಳಿಸುತ್ತಾರೆ. ಜನವರಿ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ನುಡಿದರು. ಸಮಯ ಬಂದಾಗ ಆಗುತ್ತೆ: ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್ ರಚನೆಯಾಗುತ್ತದೆಯೇ ಎಂಬ ಪ್ರಶ್ನೆಗೆ, ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಚರ್ಚೆ ಸೂಕ್ತವಲ್ಲ ಎಂದು ಹೇಳಿದ್ದಾರೆ. ಮುಖಂಡರು, ಶಾಸಕರು ಚರ್ಚೆ ಮಾಡಬೇಡಿ ಎಂದಿದ್ದಾರೆ. ಸಮಯ ಸಂದರ್ಭ ಬಂದಾಗ ವರಿಷ್ಠರು ಹೇಳುತ್ತಾರೆ. ವರಿಷ್ಠರೇ ನಿರ್ಧಾರ ಮಾಡುತ್ತಾರೆ ಎಂದಷ್ಟೇ ಹೇಳಿದರು. ನಾವು 136 ಜನ ಶಾಸಕರಿದ್ದೇವೆ. ಜನರ ವಿಶ್ವಾಸದ ಮೇಲೆ ನಾವು ಕೆಲಸ ಮಾಡಬೇಕಿದೆ. ಜನಪರ ಕಾರ್ಯಕ್ರಮ ನೀಡುವುದೇ ನಮ್ಮ ಆದ್ಯತೆ. ಆ ಹಿನ್ನೆಲೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸದ್ಯಕ್ಕೆ ನಾವು ಅಭಿವೃದ್ಧಿ ಕೆಲಸಕ್ಕೆ ಗಮನ ಕೊಡುತ್ತಿದ್ದೇವೆ ಎಂದರು. ಯಾರು ಮಂತ್ರಿ ಇರಬೇಕು. ಯಾರಿಗೆ ಬೇರೆ ಅಧಿಕಾರ ಸಿಗಬೇಕು ಎಂಬುದನ್ನೆಲ್ಲ ವರಿಷ್ಠರೇ ತೀರ್ಮಾನ ಮಾಡುತ್ತಾರೆ. ಪಕ್ಷದಲ್ಲೇ ಯಾರೇ ಏನೇ ಹೇಳಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಡಿ.ಕೆ. ಶಿವಕುಮಾರ ಡಿಸಿಎಂ ಇದ್ದಾರೆ. ಮಂತ್ರಿ ಮಂಡಳವೂ ಪೂರ್ಣ ಪ್ರಮಾಣದಲ್ಲಿದೆ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಇಲ್ಲ ಎಂದರು. ಸತೀಶ ಜಾರಕಿಹೊಳಿ ಶಾಸಕರ ಜೊತೆ ಟ್ರಿಪ್ ಪ್ಲ್ಯಾನ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಸಲೀಂ, ಅವರು ಮೈಸೂರು ದಸರಾಕ್ಕೆ ಹೋಗಿದ್ದರು ಅಷ್ಟೇ. ಎರಡು ವರ್ಷ ಕೊರೋನಾ ಇತ್ತು. ದಸರಾ ಸಂಭ್ರಮ ಇರಲಿಲ್ಲ. ಈ ಸಲ ನಮ್ಮ ಸರ್ಕಾರವೂ ಬಂದಿದೆ. ಹೀಗಾಗಿ ದಸರಾ ನೋಡಲು ಹೋಗಿದ್ದರು ಅಷ್ಟೇ. ಅಷ್ಟಕ್ಕೆ ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂದೆಲ್ಲ ಬಿಂಬಿಸುವುದು ಸರಿಯಲ್ಲ. ನಮ್ಮಲ್ಲಿ ಗುಂಪುಗಾರಿಕೆಯೂ ಇಲ್ಲ. ಭಿನ್ನಮತವೂ ಇಲ್ಲ ಎಂದು ಹೇಳಿದರು. ಬಹಳಷ್ಟು ಜನ ಬರ್‍ತಾರೆ: ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಾಕಷ್ಟು ಜನ ಕಾಂಗ್ರೆಸ್‌ಗೆ ಬರಲಿದ್ದಾರೆ. ಈಗಾಗಲೇ ಬಿಜೆಪಿ- ಜೆಡಿಎಸ್ ಅನೇಕ ಮುಖಂಡರು ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಅದರಲ್ಲಿ ಅನೇಕ ಶಾಸಕರೂ ಇದ್ದಾರೆ. ಆದರೆ, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ನಿರ್ಧಾರ ವರಿಷ್ಠರೇ ಮಾಡುತ್ತಾರೆ. ಬೇರೆ ಪಕ್ಷದವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ. ನಾವೇನು ಆಪರೇಷನ್ ಹಸ್ತ ಮಾಡುತ್ತಿಲ್ಲ. ಅದರ ಅನಿವಾರ್ಯವೂ ನಮಗಿಲ್ಲ. ಬಹುಮತಕ್ಕೆ ಎಷ್ಟು ಬೇಕೋ ಅದಕ್ಕಿಂತಲೂ ಹೆಚ್ಚಿನ ಶಾಸಕರೇ ನಮ್ಮಲ್ಲಿದ್ದಾರೆ ಎಂದರು. ಮಲತಾಯಿ ಧೋರಣೆ: ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರದಲ್ಲಿ ರಾಜ್ಯದ ಪ್ರಭಾವಿ ಮಂತ್ರಿಗಳಿದ್ದಾರೆ. ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿದ್ದಾರೆ. ಐದು ಜನ ಮಂತ್ರಿಗಳು ನಮ್ಮ ರಾಜದವರೇ ಇದ್ದಾರೆ. 25 ಜನ ಸಂಸದರಿದ್ದಾರೆ. ಆದರೆ ಯಾರೊಬ್ಬರು ರಾಜ್ಯದ ವಿಷಯದಲ್ಲಿ ಸಹಕಾರ ಕೊಡುತ್ತಿಲ್ಲ ಎಂದರು. ಬರ ಅಧ್ಯಯನ ತಂಡ ಬಂದು ಹೋಗಿದೆ. ಆದರೆ ಈವರೆಗೂ ಹಣ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಹಿಂದೆ ಅಕ್ಕಿ ಕೊಡುವ ವಿಚಾರದಲ್ಲೂ ರಾಜಕೀಯ ಮಾಡಿದ್ದರು. ಈಗ ಬರದ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.