ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಶಾಸಕರು ಪುರಸಭೆ ವ್ಯಾಪ್ತಿಗೆ ಬಂದಿರುವ ನಿವೇಶನ ವಸತಿಗಳನ್ನು ಫಲಾನುಭವಿಗಳಿಗೆ ಮಾರಿಕೊಂಡಿದ್ದಾರೆ ಎಂದು ಪುರಸಭೆ ಸದಸ್ಯ ಮರಿರಾಮಪ್ಪ ಶಾಸಕ ಕೆ. ನೇಮರಾಜನಾಯ್ಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆ ಕಚೇರಿ ಮುಂಭಾಗ ೨೨೪ ವಸತಿ ಮತ್ತು ನಿವೇಶನ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕ ಕ್ರಮ ಅನುಸರಿಸದ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.
ಶಾಸಕರ ವರ್ತನೆಯಿಂದಾಗಿ ಪಟ್ಟಣದ ವಾರ್ಡ್‌ಗಳ ಬಡ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ವಸತಿ ಮತ್ತು ನಿವೇಶನದ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ಏಕಪಕ್ಷೀಯ ನಿರ್ಣಯ ಮತ್ತು ಪಕ್ಷಪಾತ ಧೋರಣೆಯಿಂದಾಗಿ ಪುರಸಭೆ ಸದಸ್ಯರು ಜನರ ಕ್ಷಮೆ ಕೇಳುವಂತಾಗಿದೆ. ತಾವೊಬ್ಬ ಜನಪ್ರತಿನಿಧಿಯಾಗಿ ಪುರಸಭೆ ಸದಸ್ಯರೂ ಚುನಾಯಿತ ಪ್ರತಿನಿಧಿಗಳು ಎಂಬುದನ್ನು ಶಾಸಕರು ಮರೆತಿದ್ದಾರೆ ಎಂದು ಹರಿಹಾಯ್ದರು.ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ ಮಾತನಾಡಿ, ಶಾಸಕರು ಪುರಸಭೆ ಸದಸ್ಯರ ಹಕ್ಕು ಮೊಟಕುಗೊಳಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಾಳಿಗೆ ತೂರಿದ್ದಾರೆ. ತಮ್ಮ ಕೆಲ ಬೆಂಬಲಿಗರ ಅಭಿಪ್ರಾಯದಂತೆ ಆಯ್ಕೆ ನಡೆಸಿ, ವಸತಿ ಮತ್ತು ನಿವೇಶನರಹಿತ ಜನರಿಗೆ ಅನ್ಯಾಯವೆಸಗಿದ್ದಾರೆ ಎಂದು ಗುಡುಗಿದರು.
ಪುರಸಭೆ ಸದಸ್ಯ ನವೀನ್‌ಕುಮಾರ್ ಮಾತನಾಡಿ, ಈ ಹಿಂದೆ ಇದೇ ಶಾಸಕರು ಮಾಜಿಯಾಗಿದ್ದ ವೇಳೆ, ವಸತಿ ಆಯ್ಕೆಯಲ್ಲಿ ಅಕ್ರಮವಾಗಿದೆ ಎಂದು ಧರಣಿ ನಡೆಸಿ, ಬಂದಿರುವ ಅನುದಾನ ವಾಪಸ್ ಹೋಗಲು ಕಾರಣವಾಗಿದ್ದರು. ಇದೀಗ ಶಾಸಕರಾಗಿ ಅಧಿಕಾರ ಸಿಗುತ್ತಿದ್ದಂತೆ ಅಕ್ರಮವಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಪುರಸಭೆ ಸದಸ್ಯರನ್ನು ನಿರ್ಲಕ್ಷಿಸಿದ್ದಾರೆ. ವಸತಿ ನಿವೇಶನ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಸದಸ್ಯ ಪವಾಡಿ ಹನುಮಂತಪ್ಪ ಮಾತನಾಡಿ, ಶಾಸಕರು ತಮ್ಮ ಇಚ್ಛೆಯಂತೆ ವಸತಿ ಮತ್ತು ನಿವೇಶನ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ. ಪುರಸಭೆ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ಆಯ್ಕೆಪಟ್ಟಿ ಅನುಮೋದನೆಗೆ ಕಳುಹಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಆಯ್ಕೆಪಟ್ಟಿಯನ್ನು ಪುರಸಭೆಯ ಎಲ್ಲ ಸದಸ್ಯರು ಒಪ್ಪುವುದಿಲ್ಲ. ಪುರಸಭೆ ಸದಸ್ಯರ ಮೂಲಕ ಆಯ್ಕೆ ಪಟ್ಟಿಯನ್ನು ಸಿದ್ಧಗೊಳಿಸಬೇಕು. ವಾರ್ಡ್ ಸಭೆಗಳ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಅಜೀಜುಲ್ಲಾ, ಅಲ್ಲಾಭಕ್ಷಿ, ಗ್ರಾಪಂ ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ ಮಾತನಾಡಿದರು. ಪುರಸಭೆ ವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ರಾಜೇಶ್ ಬ್ಯಾಡಗಿ, ತೆಲಿಗಿ ನೆಲ್ಲು ಇಸ್ಮಾಯಿಲ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಿ. ಹನುಮಂತಪ್ಪ, ಮುಖಂಡರಾದ ಸಂದೀಪ್ ಶಿವಮೊಗ್ಗ, ಈ. ಭರತ್, ಅಂಬಳಿ ರವೀಂದ್ರಗೌಡ, ಗುರುಬಸವರಾಜ ಸೊನ್ನದ್ ಇತರರಿದ್ದರು.