ಜ್ಯೋತಿಷಿ ಮಾತುಕೇಳಿ ನದಿಗಳಿಗೆ ತ್ಯಾಜ್ಯ ಹಾಕಬೇಡಿ

KannadaprabhaNewsNetwork | Published : Nov 16, 2024 12:34 AM

ಸಾರಾಂಶ

ಜ್ಯೋತಿಷಿಗಳು ಹೇಳುವಂತೆ ತೊಟ್ಟಬಟ್ಟೆ ಹಾಗೂ ಪೂಜಾ ವಸ್ತುಗಳನ್ನು ನದಿಗಳಲ್ಲಿ ಹಾಕಿ, ಪಾಪಬಿಟ್ಟು ಹೋಗುತ್ತದೆ ಎಂಬ ಮಾತನ್ನು ನಂಬಬೇಡಿ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹರಿಹರದಲ್ಲಿ ನುಡಿದಿದ್ದಾರೆ.

- ಹರಿಹರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ- ಜನಜಾಗೃತಿ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀ - - - ಕನ್ನಡಪ್ರಭ ವಾರ್ತೆ ಹರಿಹರ ಜ್ಯೋತಿಷಿಗಳು ಹೇಳುವಂತೆ ತೊಟ್ಟಬಟ್ಟೆ ಹಾಗೂ ಪೂಜಾ ವಸ್ತುಗಳನ್ನು ನದಿಗಳಲ್ಲಿ ಹಾಕಿ, ಪಾಪಬಿಟ್ಟು ಹೋಗುತ್ತದೆ ಎಂಬ ಮಾತನ್ನು ನಂಬಬೇಡಿ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನುಡಿದರು.

ನಗರದಲ್ಲಿ ಶುಕ್ರವಾರ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಆಶ್ರಯದಲ್ಲಿ ಶೃಂಗೇರಿಯಿಂದ ಕಿಷ್ಕಿಂದೆವರೆಗಿನ ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ನಡೆದ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರು ನಿತ್ಯ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳ ಮಾತನ್ನು ನಂಬಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಬಟ್ಟೆ, ಇನ್ನಿತರೆ ತ್ಯಾಜ್ಯಗಳನ್ನು ಬಿಟ್ಟುಹೋಗುತ್ತಿದ್ದಾರೆ. ಇದರಿಂದ ನದಿಮೂಲ ಮಲೀನಗೊಳ್ಳುತ್ತಿದೆ. ನಿಮ್ಮ ಮುಂದಿನ ತಲೆಮಾರಿಗೆ ಕುಡಿಯಲು ಶುದ್ಧ ನೀರು ಸಿಗದಂತಹ ಪರಿಸ್ಥಿತಿ ಉದ್ಭವ ಅಗಲಿದೆ ಎಂದು ತಿಳಿಸಿದರು.

ಪಂಚಮಹಾ ಭೂತಗಳಾದ ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ ಇವು ಎಲ್ಲ ಜಾತಿ, ಜನಾಂಗಕ್ಕೂ, ಜಲಚರ, ವನಚರ ಜೀವಿಗಳಿಗೂ ಅತ್ಯವಶ್ಯವಾಗಿವೆ. ಇವುಗಳ ಸಂರಕ್ಷಣೆಗೆ ಸರ್ವರೂ ಜಾಗೃತರಾಗಿರಬೇಕು. ಯಾವುದೇ ಪ್ರಯತ್ನ ಮಾಡಿಯಾದರೂ ಜಲಮೂಲವಾದ ನದಿಯ ಪಾವಿತ್ರ್ಯ ರಕ್ಷಿಸಿ, ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮಾನವ ತನ್ನ ವೈಭೋಗದ ಜೀವನಶೈಲಿಗಾಗಿ ಇಂದು ಪರಿಸರವನ್ನು, ಜಲಮೂಲಗಳನ್ನು ಹಾಳುಮಾಡುತ್ತಿದ್ದಾನೆ. ಹೀಗಾಗಿ, ದೆಹಲಿಯಂಥ ನಗರಗಳು ಅತ್ಯಂತ ವಾಯು ಮಾಲಿನ್ಯದಿಂದ ಕೂಡಿವೆ. ಪರಿಸರ ಹಾಗೂ ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಲಿ ಎಂದು ತಿಳಿಸಿದರು.

ನವದೆಹಲಿಯ ಆಂದೋಲನ ಸಂಚಾಲಕ ಬಸವರಾಜ ಪಾಟೀಲ ವೀರಾಪುರ ಮಾತನಾಡಿ, ಭಾರತದಾದ್ಯಂತ ಈಗಾಗಲೇ 272 ನದಿಗಳನ್ನು ಸಂರಕ್ಷಿಸಲು ಗುರುತಿಸಲಾಗಿದೆ. ಅವುಗಳ ರಕ್ಷಣೆಗಾಗಿ ದೇಶದಾದ್ಯಂತ 21 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಿದ್ದೇವೆ. ಪ್ರಸ್ತುತದ ಪಾದಯಾತ್ರೆ ಈಗಾಗಲೇ 230 ಕಿ.ಮೀ. ಕ್ರಮಿಸಿ, ಜನಜಾಗೃತಿ ಮೂಡಿಸಿದೆ. ಸದ್ಯದಲ್ಲಿಯೇ ಅಲಹಾಬಾದ್‍ನ ಪ್ರಯಾಗರಾಜ್‍ನಲ್ಲಿ 45 ದಿನಗಳ ಕಾಲ ಕುಂಭಮೇಳ ನಡೆಯಲಿದೆ ಎಂದರು.

ಬೆಳಗ್ಗೆ ನಗರದ ಹರಿಹರೇಶ್ವರ ದೇವಸ್ಥಾನದದಿಂದ ಆರಂಭವಾದ ಪಾದಯಾತ್ರೆಗೆ ಸಂಸದೆ ಡಾ.ಪ್ರಭಾ ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಚಾಲನೆ ನೀಡಿದರು. ಸರ್ವೋದಯ ಮಠದ ಶಿವಕುಮಾರ ಸ್ವಾಮೀಜಿ, ಚನ್ನಗಿರಿ ಕ್ಷೇತ್ರ ಮಾಜಿ ಶಾಸಕ ಮಹಿಮಾ ಪಟೇಲ್, ಐಐಟಿ ಕಾಲೇಜಿನ ಎಲ್.ಕೆ.ಶ್ರೀಪತಿ, ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ, ಆಂದೋಲನ ಸಂಯೋಜಕ ಮಾಧವನ್‍ಜೀ, ವಿವೇಕತ್ಯಾಗಿ, ಡಾ.ಶಶಿಕುಮಾರ್ ಮೆಹರ್ವಾಡೆ, ಪಿಎಸ್‍ಐ ಶ್ರಿಪತಿ ಗಿನ್ನಿ, ವೀರೇಶ ಅಜ್ಜಣ್ಣನವರ್, ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.

- - - -15ಎಚ್.ಆರ್.ಆರ್02:

ಹರಿಹರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ಆರಂಭಿಸಿರುವ ಬೃಹತ್ ಪಾದಯಾತ್ರೆ ಜಾಗೃತಿ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀ ಸಾನಿಧ್ಯ ವಹಿಸಿದ್ದರು. ಶಾಸಕ ಬಿ.ಪಿ. ಹರೀಶ್, ಇತರರು ಉಪಸ್ಥಿತರಿದ್ದರು. -15ಎಚ್‍ಆರ್‍ಆರ್02ಎ:

ತುಂಗಭದ್ರಾರತಿ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು, ಭಕ್ತರು ಭಾಗವಹಿಸಿದ್ದರು.

Share this article