ಸಿರಿಗನ್ನಡ ವೇದಿಕೆಯ ಆಶ್ರಯದಲ್ಲಿ ಶ್ರಾವಣ ನುಡಿಸಿರಿ ಕಾರ್ಯಕ್ರಮ- ಉಪನ್ಯಾಸ
ರೇಡಿಯೋ ಜ್ಞಾನಾರ್ಜನೆಗೆ ಪೂರಕವಾದ ಮಾಧ್ಯಮವಾಗಿದ್ದು ಪ್ರತಿ ನಿತ್ಯ ರೇಡಿಯೋ ಕೇಳುವುದರಿಂದ ಕನ್ನಡ ಭಾಷೆ ಜ್ಞಾನ, ಪದಗಳ ಉಚ್ಛಾರಣೆ ಬಗ್ಗೆ ಅರಿವು ಮೂಡಲಿದೆ ಎಂದು ಆಕಾಶವಾಣಿ ಭದ್ರಾವತಿ ನಿವೃತ್ತ ಹಿರಿಯ ಉದ್ಘೋಷಕಿ ಎ.ಎನ್. ಮಂಜುಳಾ ಹೇಳಿದರು.
ಸಿರಿಗನ್ನಡ ವೇದಿಕೆ ತಾಲೂಕು ಘಟಕ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ಶ್ರಾವಣಿ ನುಡಿಸಿರಿ ಕಾರ್ಯಕ್ರಮದಲ್ಲಿ ರೇಡಿಯೋ, ಇಂದಿನ ದೂರದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ರೇಡಿಯೋ ಇಂದಿಗೂ ಸಹ ಅಂದಿನಂತೇ ಇದೆ. ರೇಡಿಯೊದಲ್ಲಿನ ಕಾರ್ಯಕ್ರಮ ಬದಲಾಗಿಲ್ಲ. ಬದಲಾಗಿ ಕಾರ್ಯಕ್ರಮದ ಗುಣಮಟ್ಟ ಕಡಿಮೆಯಾಗುತ್ತಿದೆ. ದೂರದರ್ಶನದಲ್ಲಿ ಇಂದು ಹತ್ತಾರು ಖಾಸಗಿ ಚಾನಲ್ ಗಳು ಹೇಳಿದ್ದನ್ನೇ ಹೇಳುವ, ತೋರಿಸಿದ ವಿಷಯವನ್ನೇ ಮತ್ತೆ ಮತ್ತೆ ತೋರಿಸುವ ಪ್ರವೃತ್ತಿಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ ಎಂದರು.ದೂರದರ್ಶನ ನೋಡುವುದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ. ಆದರೆ, ರೇಡಿಯೋ ಕೇಳುತ್ತಲೇ ಕೆಲಸ ಮಾಡಬಹುದು. ರೇಡಿಯೋ ಮೂಲಕ ಯಾವುದೇ ಭಾಷೆ ವಿಚಾರಗಳನ್ನು ಆಲಿಸಬಹುದು. ರೇಡಿಯೋ ಆಲಿಸುವುದರಿಂದ ಕಿವಿಗೆ ಇಂಪು, ಮನಸ್ಸಿಗೂ ನೆಮ್ಮದಿ ಎಂದು ತಿಳಿಸಿದರು.
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ಪ್ರಕಾಶ್ ಮಾತನಾಡಿ, ಸಿರಿಗನ್ನಡ ವೇದಿಕೆ 2003ರಲ್ಲಿ ವೆಂಕಟರಮಣ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು, ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡಲು ಸಿರಿಗನ್ನಡ ವೇದಿಕೆ ಸ್ಥಾಪಿಸಿದರು. ಕನ್ನಡದ ಭಾಷೆ ಕನ್ನಡಿಗರೇ ಬೆಳೆಸ ಬೇಕು. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವುದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಶರಣರ ವಚನ, ಕವಿಗಳ ಕವನ, ಉತ್ತಮ ಬರಹಗಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಂಸ್ಕಾರ ಬೆಳೆಸುವ ಕಾರ್ಯವನ್ನು ಸಿರಿಗನ್ನಡ ವೇದಿಕೆ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಆಕಾಶವಾಣಿ ನಿವೃತ್ತ ಉದ್ಘೋಷಕಿ ಎ.ಎನ್.ಮಂಜುಳಾ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಮಲ ಸತೀಶ್, ಹಿರಿಯ ಸಾಹಿತಿ ಜಯಮ್ಮ, ಜಾನಪದ ಕಲಾವಿದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.
------