ಹೊಸಪೇಟೆ: ಬಳ್ಳಾರಿ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾದ ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸಿದ ಸಚಿವ ಸಂಪುಟದ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಸಿಪಿಎಂ, ಕೂಡಲೇ ಸಚಿವ ಸಂಪುಟದ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರೈತರು ಗುತ್ತಿಗೆಗೆ ಪಡೆದ ಜಮೀನುಗಳಿಗೆ ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ ₹25 ರಿಂದ ₹30 ಸಾವಿರ ದರ ನೀಡುತ್ತಿರುವಾಗ ರಾಜ್ಯ ಸರ್ಕಾರ, ಕಂಪನಿಗಳಿಗೆ ಇಷ್ಟು ಕಡಿಮೆ ಬೆಲೆಗೆ ನೀಡುವುದೇಕೆ? ಕೂಡಲೇ ಗುತ್ತಿಗೆಯ ಮೊತ್ತವನ್ನು ಕನಿಷ್ಠ ₹30,000ಗೆ ಹೆಚ್ಚಿಸಬೇಕು. ಇದರಲ್ಲಿ ಜಮೀನು ನೀಡಿದ ರೈತ ಕುಟುಂಬಕ್ಕೆ ತಲಾ ಎಕರೆಗೆ ₹25,000 ನೀಡಲು ಅಗತ್ಯ ಕ್ರಮ ವಹಿಸಬೇಕು. ಗುತ್ತಿಗೆ ಜೊತೆ ಮಾರಾಟ (ಲೀಸ್ ಕಂ ಸೇಲ್) ಒಪ್ಪಂದದ ಮೂಲಕ ಹಳೆಯ ದರಕ್ಕೆ ಮಾರಾಟ ಮಾಡುವ ಕ್ರಮ ಅಕ್ಷಮ್ಯ. ಕೂಡಲೇ ಗುತ್ತಿಗೆ ಜೊತೆ ಮಾರಾಟ ಕ್ರಮದಲ್ಲಿ ಮಾರಾಟದ ಒಪ್ಪಂದವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಆರ್.ಭಾಸ್ಕರ್ ರೆಡ್ಡಿ, ಆರ್.ಎಸ್. ಬಸವರಾಜ, ಮಾಳಮ್ಮ, ಎ.ಕರುಣಾನಿಧಿ, ಕೆ.ನಾಗರತ್ನ, ಜಗನ್ನಾಥ್, ವಿ.ಸ್ವಾಮಿ, ಸಪ್ನ, ರೇಣುಕಮ್ಮ, ವಿರೂಪಾಕ್ಷಪ್ಪ ಎಂ. ಗೋಪಾಲ್ ಮತ್ತಿತರರಿದ್ದರು.