ಕನ್ನಡಪ್ರಭವಾರ್ತೆ, ಹಾಸನ
ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಾಸನ ಆಕಾಶವಾಣಿ ಕೇಂದ್ರದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವು ದಿನಮಾನಗಳಿಂದ ಯುವಕರಲ್ಲಿ ಆಕಾಶವಾಣಿ ಕೇಳುವಿಕೆ ಕಡಿಮೆಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನ ಆಕಾಶವಾಣಿ ಪ್ರಸಾರ ಮಾಡಿಕೊಂಡು ಬರುತ್ತಿದೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಕಾರ್ಯಕ್ರಮವು ಯುವಜನರಿಗೆ ಸಹಕಾರಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸಬೇಕು. ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿಯೇ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಡಾ. ವಿಕ್ರಂ ಬಿ. ಮಾತನಾಡಿ, ಆಕಾಶವಾಣಿಯನ್ನು ಪ್ರತಿನಿತ್ಯ ಆಲಿಸಿದ ಅನೇಕರು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ನಾವು ಚಿಕ್ಕ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಬರುವ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಾಗೂ ಸುಮಧುರ ಗೀತೆಗಳನ್ನು ಆಲಿಸಿ ಜೀವನದಲ್ಲಿ ಒಂದಿಷ್ಟು ಒಳ್ಳೆಯ ಗುಣ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಕಲಿಯಲು ರೇಡಿಯೋ ಸಹಕಾರಿಯಾಯಿತು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನವೀನ್ ಮಾತನಾಡಿ, ಆಕಾಶವಾಣಿ ವತಿಯಿಂದ ಕಾಲೇಜು ಹಂತಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಇಂದಿನ ಮಕ್ಕಳನ್ನು ಮತ್ತೊಮ್ಮೆ ಆಕಾಶವಾಣಿ ಕಾರ್ಯಕ್ರಮಗಳ ಆಲಿಸುವಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.