ಸಾಹಿತ್ಯಿಕ ಚಟುವಟಿಕೆಗಳು ಅರ್ಥಪೂರ್ಣ ಬದುಕಿನ ಪೂರಕ ಸಾಧನ: ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿ

KannadaprabhaNewsNetwork |  
Published : Oct 13, 2025, 02:00 AM IST
12 ಬೀರೂರು 3ತಾಲ್ಲೂಕು ಸಮ್ಮೇಳನಕ್ಕೆಆಗಮಿಸಿದ್ದ ಎಸ್.ಜಿ.ಕೊಪ್ಪಲು ಸರ್ಕಾರಿ ಶಾಲೆಯ ವಿಕಲಚೇತನ ಶಿಕ್ಷಕ ದಾಸೇಗೌಡ್ರು ವೇದಿಕೆ ಹತ್ತಲುಆಗದೇ ಇದ್ದ ಕಾರಣ ಗಣ್ಯರು ವೇದಿಕೆ ಇಳಿದು ಭುವನೇಶ್ವರಿ ಪುತ್ತಳಿ ಸಮೀಪ ಬಂದು ಶಿಕ್ಷಕರನ್ನು ಗೌರವಿಸಿದರು. | Kannada Prabha

ಸಾರಾಂಶ

ಬೀರೂರು, ಹೆತ್ತ ತಾಯಿ ಮತ್ತು ಜನ್ಮ ನೀಡಿದ ನಾಡು ಎರಡೂ ಸ್ವರ್ಗಕ್ಕಿಂತ ಮಿಗಿಲು. ಕರ್ನಾಟಕದ ಅಧಿಕೃತ ಭಾಷೆಯಾದ ಕನ್ನಡ ನುಡಿ ಬಳಕೆ ಮತ್ತು ಸಂರಕ್ಷಣೆ ಜವಾಬ್ದಾರಿಯೊಂದಿಗೆ ಅಸ್ಥಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಮನೆ-ಮನಗಳಲ್ಲಿ ಎಲ್ಲೆಡೆ ಪ್ರಸರಣ ಮತ್ತು ಪ್ರಚಾರದ ಬಹುದೊಡ್ಡ ಗಮ್ಯದೊಂದಿಗೆ ತನ್ನ ಧ್ಯೇಯೋದ್ದೇಶಗಳನ್ನು ಸಾಕ್ಷಾತ್ಕರಿ ಸುವಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಮ್ಮೇಳನಾಧ್ಯಕ್ಷೆ ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿ ತಿಳಿಸಿದರು.

- ಕಡೂರಿನ ದೊಡ್ಡಪಟ್ಟಣಗೆರೆಯ ಕಟ್ಟೆಹೊಳೆಯಮ್ಮ ದೇವಾಲಯಲ್ಲಿ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಅಭಿಮತ

ಕನ್ನಡಪ್ರಭ ವಾರ್ತೆ, ಬೀರೂರು

ಹೆತ್ತ ತಾಯಿ ಮತ್ತು ಜನ್ಮ ನೀಡಿದ ನಾಡು ಎರಡೂ ಸ್ವರ್ಗಕ್ಕಿಂತ ಮಿಗಿಲು. ಕರ್ನಾಟಕದ ಅಧಿಕೃತ ಭಾಷೆಯಾದ ಕನ್ನಡ ನುಡಿ ಬಳಕೆ ಮತ್ತು ಸಂರಕ್ಷಣೆ ಜವಾಬ್ದಾರಿಯೊಂದಿಗೆ ಅಸ್ಥಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಮನೆ-ಮನಗಳಲ್ಲಿ ಎಲ್ಲೆಡೆ ಪ್ರಸರಣ ಮತ್ತು ಪ್ರಚಾರದ ಬಹುದೊಡ್ಡ ಗಮ್ಯದೊಂದಿಗೆ ತನ್ನ ಧ್ಯೇಯೋದ್ದೇಶಗಳನ್ನು ಸಾಕ್ಷಾತ್ಕರಿ ಸುವಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಮ್ಮೇಳನಾಧ್ಯಕ್ಷೆ ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿ ತಿಳಿಸಿದರು.ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ ಕಟ್ಟೆಹೊಳೆಯಮ್ಮ ದೇವಾಲಯದ ಆವರಣದ ಅಜ್ಜಂಪುರ ಜಿ.ಸೂರಿ ವೇದಿಕೆಯಲ್ಲಿ ಭಾನುವಾರ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಜನತೆಯಿಂದ ಎಂದರೆ ಉತ್ಪ್ರೇಕ್ಷೆಯಲ್ಲ. ಭಾಷಾ ಉಳಿವಿನ ಬಗ್ಗೆ,ಸಾಹಿತ್ಯ ಸಂಸ್ಕೃತಿ ಬಗ್ಗೆ ಗ್ರಾಮೀಣರಲ್ಲಿ ಹೆಚ್ಚಿನ ಒಲವು ಮೂಡಬೇಕೆಂದರೆ ಅವರ ಜೀವನ ನೆಮ್ಮದಿಯಿಂದಿರಬೇಕು. ಆ ನೆಮ್ಮದಿ ಬದುಕಿಗೆ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ದೊರಕಿಸಿಕೊಡುವ ಕಾರ್ಯ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಮಾಡಬೇಕು. ಆಗ ಸಹಜವಾಗೇ ಸಾಹಿತ್ಯ ಸಂಸ್ಕೃತಿ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಪ್ರತಿಪಾದಿಸಿದರು.ಸಾಹಿತ್ಯಿಕ ಚಟುವಟಿಕೆಗಳು ಕೇವಲ ಮನೋರಂಜನೆಯಷ್ಟೆ ಅಲ್ಲ. ಅರ್ಥಪೂರ್ಣ ಬದುಕಿಗೆ ಪೂರಕ ಸಾಧನ. ಬದುಕಿನ ಸೂಕ್ಷ್ಮತೆ, ಜೀವನ ಮೌಲ್ಯ, ಸಂಬಂಧ, ಮಾನವೀಯ ಮತ್ತು ಸಾಮಾಜಿಕ ಮೌಲ್ಯ, ನಾಗರಿಕ ಪ್ರಜ್ಞೆ ಎಲ್ಲವನ್ನು ಸಾಹಿತ್ಯದ ಒಡನಾಟ ನಮಗೆ ನೀಡುತ್ತದೆ. ಇಂತಹ ಆತ್ಮೋನ್ನತಿ ಸಾಧನವಾದ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಕಸಾಪ ಕಾರ್ಯ ಶ್ಲಾಘನೀಯ. ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಸಾರದ ಜೊತೆನಮ್ಮ ಭವ್ಯ ಪರಂಪರೆ ಪ್ರತೀಕವಾದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಪರಿಷತ್ತು ಜವಾಬ್ದಾರಿ ಹೊರಬೇಕಿದೆ ಎಂದರು. ಕಡೂರು ತಾಲೂಕಿನ ಹೆಮ್ಮೆಯ ನೃತ್ಯಶಾರದೆ ಪದ್ಮವಿಭೂಷಣ ಡಾ.ಕೆ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ, ತಂಗಲಿ ಬಳಿಯಿರುವ ಹುಲಿಕಲ್ಲು ಜೈನ ಸ್ಮಾರಕದ ರಕ್ಷಣೆಯಾಗಬೇಕು. ಈ ಕಾರ್ಯಗಳಿಗೆ ಪರಿಷತ್ತು ಆಧ್ಯತೆ ನೀಡಲೇಬೇಕು ಎಂದು ಆಗ್ರಹಿಸಿದರು.ಶಾಸಕ ಕೆ.ಎಸ್.ಆನಂದ್ ಅತ್ಯಂತ ಉತ್ಸಾಹಿ ಹಾಗೂ ಕ್ರಿಯಾಶೀಲ ವ್ಯಕ್ತಿ. ತಾಲೂಕಿನ ರೈತರಿಗೆ ಅಗತ್ಯ ಸೌಲಭ್ಯ ಒದಗಿಸಲು ಆಧ್ಯತೆ ನೀಡಬೇಕು. ಗ್ರಾಮೀಣ ಭಾಗದ ನೈರ್ಮಲ್ಯತೆಗೆ ಗಮನ ಹರಿಸಿ, ಬಯಲು ನಾಡನ್ನು ಹಸಿರಾಗಿಸುವ ಶಾಶ್ವತ ನೀರಾವರಿ ವ್ಯವಸ್ಥೆಗೆ ವೇಗ ನೀಡಲು ಮುಂದಾಗಬೇಕು. ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿಕೊಂಡು ನೀರು ಕೂಡ ನಿಲ್ಲದಿರುವುದು ಜಾನುವಾರುಗಳು ಕುಡಿಯುವ ನೀರಿಗೂ ಹಪಹಪಿಸುವಂತಾಗಿದೆ. ಗ್ರಾಮಗಳಲ್ಲೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಬೇಕು , ಆಗ ಮಾತ್ರ ಗ್ರಾಮೀಣ ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ ಎಂದರು.ಸಮ್ಮೇಳನ ಉದ್ಘಾಟಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಮದನಗೌಡ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿಲ್ಲ. ಬಳಸಿದರೆ ಸಾಕು. ಆಗ ಕನ್ನಡ ಭಾಷೆ ತಂತಾನೆ ಮತ್ತಷ್ಟು ಬೆಳೆಯುತ್ತದೆ. ಕನ್ನಡ ನಾಡು ನುಡಿ, ಸಂಸ್ಕೃತಿ ಪ್ರಸಾರದ ನಿಟ್ಟಿನಲ್ಲಿ ಚಿಕ್ಕಮಗಳೂರು ಕಸಾಪ ಇಡೀ ರಾಜ್ಯದಲ್ಲಿಯೇ ಅಂತರ ರಾಜ್ಯ ಸಮ್ಮೇಳನ ದಂತಹ ವಿಶೇಷ ಸಮ್ಮೇಳನಗಳನ್ನು ಮಾಡುವ ಜೊತೆ ಜಿಲ್ಲಾಪರಿಷತ್ತಿನಲ್ಲಿ ಮಹಿಳೆಯರು ಮತ್ತು ಯುವ ಘಟಕಗಳನ್ನು ಸ್ಥಾಪಿಸಿ ಮಂಚೂಣಿಯಲ್ಲಿದೆ. ಗ್ರಾಮೀಣ ಭಾಗಗಳಲ್ಲಿಯೂ ಕನ್ನಡ ಸಾಹಿತ್ಯದ ಕಂಪು ಹರಡುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು. ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ ಮಾಡಿದ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಭಾಷೆ ಸೊಗಡನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ನಡೆಯಬೇಕು. ಕಡೂರು ಪುರಸಭೆಯಿಂದ ಕೊಳಚೆ ಪ್ರದೇಶದ ಕನ್ನಡ ಶಾಲೆಯನ್ನು ದತ್ತು ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿಯನ್ನು ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಜ್ಞಾ ವಂತರ ನಾಗರಿಕರು ಪಕ್ಷ-ಬೇಧ ಮರೆತು ಜಿಲ್ಲಾ ಸಮ್ಮೇಳನ ಆಯೋಜಿಸುವ ಜೊತೆ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಕೆ.ಬಿ.ಮಲ್ಲಿಕಾರ್ಜುನ ರನ್ನು ಗೌರವಿಸಲಾಗುವುದು, ಪರಿಷತ್ತಿನ ಜೊತೆ ಪ್ರತಿ ಯೊಬ್ಬರೂ ಕೈಜೋಡಿಸಿ ಎಂದರು.ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇತ್ತೀಚೆಗೆ ಪರಭಾಷಾ ವ್ಯಾಮೋಹ ಹೆಚ್ಚಾಗಿ ಮಾತೃಭಾಷೆಯತ್ತ ಅಸಡ್ಡೆ ಹೆಚ್ಚುತ್ತಿದೆ. ಇದನ್ನು ಪೋಷಕರು ಗಮನಿಸಿ ಕನ್ನಡ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸಲು ಮುಂದಾಗಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿಯೇ ಅತ್ಯಂತ ಕ್ರಿಯಾಶೀಲ ಪರಿಷತ್ತು ಎಂಬ ಹೆಸರನ್ನು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತು ಪಡೆದಿದೆ. ಕನ್ನಡ ನಾಡು ನುಡಿ ಬಗ್ಗೆ ಗ್ರಾಮೀಣ ಭಾಗದಲ್ಲಿಯೂ ಸುಪ್ತವಾಗಿರುವ ಅಭಿಮಾನವನ್ನು ಸದಾ ಕ್ರಿಯಾಶೀಲ ವಾಗಿಸುವ ಕಾರ್ಯವನ್ನು ಪರಿಷತ್ತು ಸದಾ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ 27 ಜನ ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜು, ಲತಾ ರಾಜಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಬಿ.ಹನುಮಂತಪ್ಪ, ಎಂ.ರಾಜಪ್ಪ, ಕೆ.ಎಂ. ಹರೀಶ್ ಅಗ್ನಿ, ಬಸಪ್ಪ, ಕೆ.ಜಿ. ಶ್ರೀನಿವಾಸಮೂರ್ತಿ, ಗೋವಿಂದಸ್ವಾಮಿ, ಎಂ.ಆರ್.ಪ್ರಕಾಶ್, ಪಿ.ಆರ್.ಗಿರಿಯಪ್ಪ, ಪೂರ್ಣೇಶ್, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಇದ್ದರು.

ಎಲ್ಲರಿಗೂ ದಾಸೋಹ: ಸಮ್ಮೇಳನಕ್ಕೆ ಆಗಮಿಸಿದ್ದ ಎಲ್ಲಾ ಕನ್ನಡ ಭಾಷಾ ಪ್ರೇಮಿಗಳಿಗೆ ಆಯೋಜಕರು ಜವೆಗೊದಿ ಪಾಯಸ, ಕೋಸಂಬರಿ , ಅನ್ನ, ಸಾಂಬರು ಮದ್ಯಾಹ್ನ ದಾಸೋಹದ ಮೂಲಕ ನೀಡಿದರು.

ಮುಂಜಾನೆ ರಾಷ್ಟ್ರ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ಶಾಲಿನಿ ದಿನೇಶ್, ಪರಿಷತ್ತಿನ ಧ್ವಜಾರೋಹಣವನ್ನು ಚಿಕ್ಕನಲ್ಲೂರು ಪರಮೇಶ್ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಪಿ.ಆರ್.ಗಿರಿಯಪ್ಪ ಉದ್ಘಾಟಿಸಿದರು. ಆಲಂಕೃತ ಸಾರೋಟು ರಥದಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ಅವರನ್ನು ವಿವಿಧ ಕಲಾ ತಂಡ ಗಳೊಂದಿಗೆ ಪರಿಷತ್ತಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮೆರವಣಿಗೆ ಮಾಡಲಾಯಿತು.

-- ಬಾಕ್ಸ್ಸ್--

ವಿವಿಧ ಪುಸ್ತಕ ಬಿಡುಗಡೆ:ಸಾಹಿತ್ಯ ಸಮ್ಮೇಳನದಲ್ಲಿ ಸಾಗದ ದಾರಿ, ದಶರೂಪಕ, ನೆನಪರಳಿದಾಗ , ಮಾಯಾಗಿರಿಯ ನೆರಳು ಮತ್ತಿತರ ಪುಸ್ತಕಗಳನ್ನು ಹನುಮಂತಪ್ಪ ಮತ್ತು ಯರದಕೆರೆ ರಾಜಣ್ಣ ಬಿಡುಗಡೆಗೊಳಿಸಿದರು.ಸಮ್ಮೇಳನದಲ್ಲಿ ಕಾಣದ ಪುಸ್ತಕ ಮಳಿಗೆಗಳು:ಪ್ರತಿ ತಾಲೂಕು ಮತ್ತು ಜಿಲ್ಲಾ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್ತು ವಿವಿಧ ಲೇಖಕರು, ಸಾಹಿತಿಗಳು ಬರೆದ ಪುಸ್ತಕ ಮಳಿಗೆ ಗಳನ್ನು ಸ್ಥಾಪಿಸಲಾಗುತ್ತಿತ್ತು ಆದರೆ ಈ ಬಾರಿ ದೊಡ್ಡಪಟ್ಟಣಗೆರೆಯ ಸಮ್ಮೇಳನದಲ್ಲಿ ಪುಸ್ತಕದ ಮಳಿಗೆಗಳು ಇಲ್ಲದ ಕಾರಣ ಸಾಹಿತ್ಯ ಪ್ರಿಯರು ಮತ್ತು ಪುಸ್ತಕ ಪ್ರೇಮಿಗಳಿಗೆ ನಿರಾಸೆಯುಂಟು ಮಾಡಿತು.

---- ಬಾಕ್ಸ್ಸ್--

-ತಾಲೂಕು 7ನೇ ಸಮ್ಮೇಳನದ ಪ್ರಮುಖ ನಿರ್ಣಯಗಳು1) ನೃತ್ಯಶಾರದೆ ಡಾ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ ರಕ್ಷಣೆ ಮತ್ತು ತಂಗಲಿ ಬಳಿಯ ಹುಲಿಕಲ್ ಬಳಿಯ ಜೈನ ಸ್ಮಾರಕದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.2) ದೊಡ್ಡ ಪಟ್ಟಣಗೆರೆ ಭಾಗಕ್ಕೆ ಅಗತ್ಯವಾದ ಶಾಶ್ವತ ನೀರಾವರಿ ವ್ಯವಸ್ಥೆಯಾಗಬೇಕು.3)ದೊಡ್ಡ ಪಟ್ಟಣಗೆರೆಯ ಐತಿಹಾಸಿಕ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಬೇಕು.4) ಕಡೂರು ಪಟ್ಟಣದ ಕನ್ನಡ ಕಲಾ ಸಂಘದ ಪುನರುಜ್ಜೀವನದ ಕಾರ್ಯವಾಗಬೇಕು.

12 ಬೀರೂರು 1ಕಡೂರು ತಾಲೂಕು ದೊಡ್ಡಪಟ್ಟಣಗೆರೆ ಗ್ರಾಮದ ಕಟ್ಟೆಹೊಳೆಯಮ್ಮ ದೇವಾಲಯದ ಆವರಣದ ಅಜ್ಜಂಪುರ ಜಿ.ಸೂರಿ ವೇದಿಕೆ ಯಲ್ಲಿ ಭಾನುವಾರ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕಸಾಪ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಮದನಗೌಡ, ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಸಮ್ಮೇಳಾನಧ್ಯಕ್ಷೆ ಡಾ.ಪಿ.ಎಚ್.ವಿಜಯಲಕ್ಷ್ಮಿ, ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ